ಎ.4ರಂದು ಬರಗೂರು ರಾಮಚಂದ್ರಪ್ಪ ಸೇರಿ ನಾಲ್ವರಿಗೆ ಜೀವನ್ಮುಖಿ ಪ್ರಶಸ್ತಿ ಪ್ರದಾನ

ಬೆಂಗಳೂರು, ಮಾ.30: ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ಸಹಯೋಗದೊಂದಿಗೆ ಜೀವನ್ಮುಖಿ ಪಾಕ್ಷಿಕ ಪತ್ರಿಕೆ ವತಿಯಿಂದ ಎ.4ರಂದು ಸಂಜೆ 4ಕ್ಕೆ ನಗರದ ಕನ್ನಡ ಭವನದಲ್ಲಿ ಹಿರಿಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಸೇರಿ ನಾಲ್ವರಿಗೆ ಜೀವನ್ಮುಖಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ವೇದಿಕೆಯ ಅಧ್ಯಕ್ಷ ಟಿ.ಸುರೇಶ್, ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ, ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ ವಲಯದ ಪ್ರಧಾನ ಆಯುಕ್ತ ಆರ್.ಭಾಗ್ಯದೇವಿ, ಉಪ ಪೊಲೀಸ್ ಆಯುಕ್ತ ಡಾ.ಸಂಜೀವ ಎಂ.ಪಾಟೀಲ ಹಾಗೂ ಸಂಸ್ಕೃತಿ ಚಿಂತಕ ಬಿ.ಕೃಷ್ಣಪ್ಪಗೆ 2021ನೇ ಸಾಲಿನ ಜೀವನ್ಮುಖಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆಂದು ಮಾಹಿತಿ ನೀಡಿದ್ದಾರೆ.
ವಿಶ್ರಾಂತ ನ್ಯಾ.ಎ.ಜೆ.ಸದಾಶಿವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಹಿರಿಯ ಸಾಹಿತಿ ಪ್ರೊ.ಹಂಪ ನಾಗರಾಜಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಉಪ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಜೀವನ್ಮುಖಿ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಸರಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಎಚ್.ಕೆ.ರಾಮು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆಂದು ಅವರು ತಿಳಿಸಿದ್ದಾರೆ.
ಇದೇ ವೇಳೆ ಬಾಲ ಪ್ರತಿಭೆಗಳಾದ ಸಮುದೃತಾ, ಯಶವಂತ್, ತನಿಷಾ, ಶ್ರೀಧರ್, ಹರ್ಷಗೌಡ, ಲಕ್ಷಯಗೌಡ, ಸಮೃದ್ಧಿ, ಸಂಜನಾ, ಸ್ಪೂರ್ತಿ, ಚಿತ್ರಾಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.







