2021ರಲ್ಲಿ ಭಾರತದ ಆರ್ಥಿಕ ಉತ್ಪಾದನೆ ಕುಸಿತ: ವಿಶ್ವಸಂಸ್ಥೆ ವರದಿ ಬಹಿರಂಗ

ಫೈಲ್ ಚಿತ್ರ
ಹೊಸದಿಲ್ಲಿ,ಮಾ.30: ಭಾರತದ 2021ರ ಆರ್ಥಿಕ ಉತ್ಪಾದನೆಯು 2019ನೇ ಇಸವಿಯಲ್ಲಿದ್ದ ಮಟ್ಟಕ್ಕಿಂತ ಕೆಳಗೆ ಕುಸಿಯಲಿದೆಯೆಂದು ವಿಶ್ವಸಂಸ್ಥೆಯ ಏಶ್ಯ ಹಾಗೂ ಪೆಸಿಫಿಕ್ (ಇಎಸ್ಸಿಎಪಿ) ಗಾಗಿನ ಆರ್ಥಿಕ ಹಾಗೂ ಸಾಮಾಜಿಕ ಆಯೋಗದ ವಾರ್ಷಿಕ ಸಮೀಕ್ಷೆ ತಿಳಿಸಿದೆ. ಕೊರೋನ ವೈರಸ್ ಹಾವಳಿಯ ವಿರುದ್ಧ ಭಾರತದ ಪ್ರತಿಕ್ರಿಯಾತ್ಮಕ ಕ್ರಮಗಳನ್ನು ಚೀನಾದ ಜೊತೆ ವರದಿಯು ಹೋಲಿಸಿದೆ. ಮಾರ್ಚ್ 9ರಂದು ಲಭ್ಯವಿರುವ ದತ್ತಾಂಶಗಳನ್ನು ಆಧರಿಸಿ ಈ ವರದಿಯನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ.
ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ದ ಬೆಳವಣಿಗೆ ದರ ಕುಸಿತವನ್ನು ಭಾರತ ಕಂಡಿದ್ದ ಸಂದರ್ಭದಲ್ಲೇ ಅದು ಕೊರೋನಾ ಸೋಂಕಿನ ಹಾವಳಿಯ ಆಘಾತವನ್ನು ಎದುರಿಸಿತ್ತು ಹಾಗೂ ಆನಂತರ ಹೇರಲಾದ ಲಾಕ್ಡೌನ್ನಿಂದಾಗಿ ಉಂಟಾದ ಆರ್ಥಿಕ ವ್ಯತ್ಯಯಗಳು 2020ರ ದ್ವಿತೀಯ ತ್ರೈಮಾಸಿಕದಲ್ಲಿ ಉಲ್ಬಣಾವಸ್ಥೆಗೆ ತಲುಪಿದವು ಎಂದು ವರದಿ ತಿಳಿಸಿದೆ.
2020ರ ತೃತೀಯ ತ್ರೈಮಾಸಿಕದಲ್ಲಿ, ಭಾರತವು ಪ್ರಶಂಸನೀಯ ಆರ್ಥಿಕ ತಿರುವನ್ನು ಕಂಡಿತಾದರೂ, ನಾಲ್ಕನೆ ತ್ರೈಮಾಸಿಕದಲ್ಲಿ ಅದರ ಚೇತರಿಕೆಯ ವೇಗವು ಮಂದವಾಗಿತ್ತು ಮತ್ತು ಆರ್ಥಿಕತೆಯ ವರ್ಷವಾರು ಬೆಳವಣಿಗೆಯ ಪ್ರಮಾಣವು ಶೂನ್ಯದ ಸನಿಹದಲ್ಲಿದೆ ಎಂದಿದೆ.
ನೂತನ ಕೋವಿಡ್-19 ಪ್ರಕರಣಗಳ ಗಣನೀಯ ಕುಸಿತ ಹಾಗೂ ಲಸಿಕೆ ಅಭಿಯಾನದ ಆರಂಭದ ಹೊರತಾಗಿಯೂ ಭಾರತದ 2021ರ ಆರ್ಥಿಕ ಉತ್ಪಾದನೆಯು 2019ರಲ್ಲಿದ್ದ ಮಟ್ಚಕ್ಕಿಂತ ಕಡಿಮೆ ಇರಲಿದೆಯೆಂದು’’ ಸಮೀಕ್ಷೆ ತಿಳಿಸಿದೆ.
ಮರುಪಾವತಿಸದ ಸಾಲಗಳ ನಿಯಂತ್ರಣ ಹಾಗೂ ಸಾಲದ ವೆಚ್ಚವನ್ನು ಕಡಿಮೆ ಪ್ರಮಾಣದಲ್ಲಿ ಕಾಪಾಡಿಕೊಳ್ಳುವುದು ಭಾರತಕ್ಕೆ ಸವಾಲಾಗಿ ಪರಿಣಮಿಸಲಿದೆಯೆಂದು ಅವರು ತಿಳಿಸಿದರು.
ಭಾರತಕ್ಕೆ ಹೋಲಿಸಿದರೆ ಚೀನಾವು ಕೋವಿಡ್-19 ಸಾಂಕ್ರಾಮಿಕದಿಂದ ಉಂಟಾದ ಆರ್ಥಿಕ ಕುಸಿತದ ವಿರುದ್ಧ ಕ್ಷಿಪ್ರ ಹಾಗೂ ಪರಿಣಾಮಕಾರಿ ಪ್ರತಿಕ್ರಿಯೆಯನ್ನು ಪ್ರದರ್ಶಿಸಿದೆ ಹಾಗೂ 2020ರ ನಾಲ್ಕನೇ ತ್ರೈಮಾಸಿಕದಲ್ಲಿ ಅದರ ವರ್ಷವಾರು ಬೆಳವಣಿಗೆ ದರವು ಶೇ.6.5 ಆಗಿದೆಯೆಂದು ಸಮೀಕ್ಷೆ ತಿಳಿಸಿದೆ. 2021ರಲ್ಲಿ ಚೀನಾದ ಆರ್ಥಿಕತೆಯ ಚೇತರಿಕೆಯಲ್ಲಿ ಇನ್ನಷ್ಚು ಸುಧಾರಣೆಯಾಗಲಿದೆಯೆಂದು ವರದಿ ಹೇಳಿದೆ.
ವಿಶ್ವಸಂಸ್ಥೆಯ ಏಶ್ಯ ಹಾಗೂ ಪೆಸಿಫಿಕ್ (ಇಎಸ್ಸಿಎಪಿ) ಗಾಗಿನ ಆರ್ಥಿಕ ಹಾಗೂ ಸಾಮಾಜಿಕ ಆಯೋಗದ ವಾರ್ಷಿಕ ಸಮೀಕ್ಷೆಯನ್ನು 1947ರಿಂದ ವಾರ್ಷಿಕವಾಗಿ ನಡೆಸಲಾಗುತ್ತಿದೆ.







