ವಿದ್ಯುತ್ ಉತ್ಪಾದನೆಯಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ ಕೆಪಿಸಿಎಲ್

ಬೆಂಗಳೂರು, ಮಾ.30: ರಾಜ್ಯ ವಿದ್ಯುತ್ ನಿಗಮ ನಿಯಮಿತವು ಮಾ.27ರಂದು ಮಾಡಿದ ದೈನಂದಿನ ವಿದ್ಯುತ್ ಉತ್ಪಾದನೆಯಲ್ಲಿ ಗರಿಷ್ಠ 121.708 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದನೆ ಮಾಡುವುದರೊಂದಿಗೆ ಶಾಖೋತ್ಪನ್ನ ವಿದ್ಯುತ್ ಘಟಕಗಳಿಂದ 80.253 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದನೆ ಮಾಡಿ ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿದೆ.
ಮಾ.25ರಂದು ಮಾಡಿದ್ದ ತನ್ನದೇ ದಾಖಲೆಗಳಾದ ಶಾಖೋತ್ಪನ್ನ ವಿದ್ಯುತ್ ಉತ್ಪಾದನೆಯಿಂದ 77.329 ಮಿಲಿಯನ್ ಯುನಿಟ್ ಹಾಗೂ ಜಲ ಮತ್ತು ಇತರೆ ಮೂಲಗಳಿಂದ 40 ಮಿಲಿಯನ್ ಯುನಿಟ್ ಉತ್ಪಾದನೆಯೊಂದಿಗೆ ಒಟ್ಟು 117.22 ಮಿಲಿಯನ್ ಯುನಿಟ್ ದೈನಂದಿನ ವಿದ್ಯುತ್ ಉತ್ಪಾದನೆಯನ್ನು ಹಿಂದಿಕ್ಕಿದೆ.
ಕೆಪಿಸಿಎಲ್‍ನ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿನ ಘಟಕಗಳು ಸುಮಾರು 30 ವರ್ಷಗಳಷ್ಟು ಹಳೆಯ ಘಟಕಗಳಾಗಿದ್ದು, ಇವುಗಳ ಉತ್ತಮ ಉತ್ಪಾದನಾ ಸಾಮರ್ಥ್ಯದಿಂದಾಗಿ ಸ್ಥಾವರ ಕಾರ್ಯಕ್ಷಮತೆ ಪ್ರಮಾಣ(ಪಿಎಲ್‍ಎಫ್) ಶೇ.95ಕ್ಕಿಂತಲೂ ಅಧಿಕವಾಗಿದ್ದು, ಬೇಸಿಗೆಯ ಈ ದಿನಗಳಲ್ಲಿ ರಾಜ್ಯದ ವಿದ್ಯುತ್ ಜಾಲಕ್ಕೆ ಕೆಪಿಸಿಎಲ್‍ನಿಂದ ಶೇ.55-60ರಷ್ಟು ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಾಗುತ್ತಿದೆ.
ಆರ್‍ಟಿಪಿಎಸ್‍ನ ವಿದ್ಯುತ್ ಘಟಕಗಳ ಕಾರ್ಯಕ್ಷಮತೆ ಪ್ರಮಾಣ: ಘಟಕ 1-ಶೇ.93.19, ಘಟಕ 2-ಶೇ.98.51, ಘಟಕ 3-ಶೇ.95.77, ಘಟಕ 4-ಶೇ.97.84, ಘಟಕ 5-ಶೇ.100.06, ಘಟಕ 6-ಶೇ.99.4 ಹಾಗೂ ಘಟಕ 7-ಶೇ.100.36.
ಪ್ರಸಕ್ತ ಬೇಸಿಗೆಯಲ್ಲಿ ಹೆಚ್ಚಿದ ವಿದ್ಯುತ್ ಬೇಡಿಕೆಯನ್ನು ನೀಗಿಸಲು ಕೆಪಿಸಿಎಲ್ ನಿರಂತರ ಶ್ರಮಿಸುತ್ತಿದೆ. ತನ್ನ ಇತರ ಎಲ್ಲ ಮೂಲಗಳಿಂದ ಅಧಿಕ ವಿದ್ಯುತ್ ಅನ್ನು ಉತ್ಪಾದಿಸಿ ರಾಜ್ಯದ ವಿದ್ಯುತ್ ಜಾಲಕ್ಕೆ ಪೂರೈಸುತ್ತಿರುವ ನಿಗಮದ ಉದ್ಯೋಗಿಗಳು ಮತ್ತು ಅಧಿಕಾರಿಗಳನ್ನು ಕೆಪಿಸಿಎಲ್‍ನ ವ್ಯವಸ್ಥಾಪಕ ನಿರ್ದೇಶಕ ವಿ.ಪೊನ್ನುರಾಜ್ ಪ್ರಕಟಣೆಯಲ್ಲಿ ಅಭಿನಂದಿಸಿದ್ದಾರೆ.







