ಶಾಲಾ ಮಕ್ಕಳಿಗೆ ಬಿಸಿಯೂಟ ಯೋಜನೆ ಪ್ರಾರಂಭಕ್ಕೆ ಸರಕಾರ ನಿರ್ಧಾರ ಕೈಗೊಳ್ಳಬೇಕು: ಹೈಕೋರ್ಟ್

ಬೆಂಗಳೂರು, ಮಾ.30: ರಾಜ್ಯದಲ್ಲಿ ಕೊರೋನ ನಿಯಂತ್ರಣಕ್ಕೆ ಬಂದ ಬಳಿಕ ಪ್ರಾರಂಭಿಸಿರುವ 6ರಿಂದ 10ನೇ ತರಗತಿವರೆಗಿನ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ 2021ರ ಎ.15ರಿಂದ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಪುನಃ ಪ್ರಾರಂಭಿಸಲು ರಾಜ್ಯ ಸರಕಾರ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.
ಮಧ್ಯಾಹ್ನದ ಬಿಸಿಯೂಟ ಯೋಜನೆ ಸ್ಥಗಿತಗೊಳಿಸಿರುವುದನ್ನು ಪ್ರಶ್ನಿಸಿ ಎಂ.ರಾಧಾ ಮತ್ತು ಇತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಹೇಳಿಕೆ ನೀಡಿದೆ. ಈಗಾಗಲೇ ರಾಜ್ಯ ಸರಕಾರ 6 ರಿಂದ 10ನೇ ತರಗತಿವರೆಗೆ ತರಗತಿಗಳನ್ನು ಪ್ರಾರಂಭಿಸಿದೆ. ಸಂವಿಧಾನದ 21ನೇ ವಿಧಿ ಶಿಕ್ಷಣದ ಹಕ್ಕನ್ನು ನೀಡಿದೆ. ಈ ಹಕ್ಕಿನಡಿ ಮಧ್ಯಾಹ್ನದ ಬಿಸಿಯೂಟವನ್ನೂ ನೀಡಬೇಕಿದೆ. ಈ ಬಗ್ಗೆ ಎ.8ರೊಳಗೆ ಸೂಕ್ತ ನಿರ್ಧಾರ ತೆಗೆದುಕೊಂಡು, ಮಾಹಿತಿ ನೀಡುವಂತೆ ರಾಜ್ಯ ಸರಕಾರಕ್ಕೆ ನ್ಯಾಯಪೀಠವು ಸೂಚನೆ ನೀಡಿದೆ.
ಅಂಗನವಾಡಿ ಕೇಂದ್ರಗಳು ಬೆಳಗ್ಗೆ 9:30ರಿಂದ ಮಧ್ಯಾಹ್ನ 12ರವರೆಗೆ ತೆರೆದಿರುತ್ತವೆ. ಈ ಮಕ್ಕಳಿಗೆ ತಲುಪಬೇಕಾದ ಆಹಾರದ ಪೊಟ್ಟಣಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಕೊರೋನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಾಂತ್ರಿಕ ಸಲಹಾ ಸಮಿತಿಯ ಸಲಹೆಯನ್ನು ಪಡೆದುಕೊಂಡ ಬಳಿಕ ಅಂಗನವಾಡಿ ಕೇಂದ್ರಗಳಲ್ಲಿಯೇ ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ವಿತರಿಸಲಾಗುವುದು ಎಂದು ಸರಕಾರದ ಪರ ವಕೀಲರು ಪೀಠಕ್ಕೆ ತಿಳಿಸಿದರು.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಮತ್ತು ಮಧ್ಯಾಹ್ನದ ಬಿಸಿಯೂಟ ಯೋಜನೆಯ ನಿಯಮಗಳ ಪ್ರಕಾರ ರಾಜ್ಯ ಸರಕಾರ ಶಾಲೆಗಳು ಪ್ರಾರಂಭವಾದ ಮೇಲೆ ಮಧ್ಯಾಹ್ನದ ಬಿಸಿಯೂಟವನ್ನು ನೀಡಬೇಕಾಗುತ್ತದೆ ಎಂದು ಅರ್ಜಿದಾರರ ಪರ ವಕೀಲರು ಪೀಠಕ್ಕೆ ತಿಳಿಸಿದರು.
ಹಸಿವಿನಿಂದ ಬಳಲುತ್ತಿಲ್ಲ ಎಂದು ಹೇಳಲು ಸಾಧ್ಯವಿಲ್ಲ
ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ಪ್ರಾರಂಭಿಸಲು ಸರಕಾರಕ್ಕೆ ಏನು ತೊಂದರೆ ಇದೆ. ಶಾಲೆಗಳನ್ನು ಪ್ರಾರಂಭಿಸಿದ ಮೇಲೆ ಊಟವನ್ನೂ ನೀಡಬೇಕಾಗುತ್ತದೆ. ಯಾರೂ ಹಸಿವಿನಿಂದ ಬಳಲುತ್ತಿಲ್ಲ ಎಂದು ಹೇಳಲು ಸಾಧ್ಯವಿಲ್ಲ.
-ಬಿ.ವಿ.ನಾಗರತ್ನ, ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ







