ನಾಗಪುರ: ಇಬ್ಬರು ಕೊರೋನ ರೋಗಿಗಳು ಆತ್ಮಹತ್ಯೆ

ನಾಗಪುರ, ಮಾ. 30: ನಾಗಪುರದಲ್ಲಿ ಕಳೆದ ಎರಡು ದಿನಗಳಲ್ಲಿ ಇಬ್ಬರು ಕೊರೋನ ರೋಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಲ್ಲಿ ಒಬ್ಬರು ಇಲ್ಲಿನ ಸರಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ.
ಕೊರೋನ ಸೋಂಕಿತ ಪುರುಷೋತ್ತಮ ಗಜ್‌ಭಿಯೆ (81) ಅವರು ಸೋಮವಾರ ಸಂಜೆ 5.30ಕ್ಕೆ ಜಿಎಂಸಿಎಚ್‌ನ ಕೋವಿಡ್ ವಾರ್ಡ್‌ನ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಗಜ್‌ಭಿಯೆ ಅವರ ಸಾವಿಗೆ ಸಂಬಂಧಿಸಿ ಅಜ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಜ್‌ಭಿಯೆ ಅವರು ಆಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿ ಮಾರ್ಚ್ 25ರಂದು ದಾಖಲಾಗಿದ್ದರು. ಮಂಗಳವಾರ ಬೆಳಗ್ಗೆ ಇನ್ನೋರ್ವ ಕೊರೋನ ರೋಗಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
85 ಪ್ಲಾಟ್ ಪ್ರದೇಶದ ನಿವಾಸಿ ವಸಂತ್ ಕುಟೆ (68) ಅವರ ಮೃತದೇಹ ಮೊದಲ ಮಹಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಅಜ್ನಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಹೇಳಲಾಗಿದೆ. ಕುಟೆ ಅವರು ಕಳೆದ 30 ವರ್ಷಗಳಿಂದ ಮೂತ್ರ ಕೋಶದ ಕಲ್ಲಿನಿಂದ ಬಳಲುತ್ತಿದ್ದರು ಎಂದು ಪ್ರಕರಣದಲ್ಲಿ ಹೇಳಲಾಗಿದೆ.





