ಚರಂಡಿ ಒಳಗೆ ವಿದ್ಯುತ್ ಕಂಬ !: ಶಿವಮೊಗ್ಗ ಸ್ಮಾರ್ಟ್ ಸಿಟಿ ಇಂಜಿನಿಯರ್ ಗಳ ಎಡವಟ್ಟು

ಶಿವಮೊಗ್ಗ, ಮಾ.30: ಸ್ಮಾರ್ಟ್ ಸಿಟಿ ಕಾಮಗಾರಿಗಳು ಅಂದ್ರೆ ಸ್ಮಾರ್ಟ್ ಆಗಿರಬೇಕು. ಆದರೆ ಇಲ್ಲಿ ಎಲ್ಲವೂ ಉಲ್ಟಾ ಆಗಿದೆ. ಸ್ಮಾರ್ಟ್ ಸಿಟಿ ಇಂಜಿನಿಯರ್ ಗಳ ಅವಾಂತರದಿಂದ ಚರಂಡಿಯಲ್ಲಿ ವಿದ್ಯುತ್ ಕಂಬ ನೆಡಲಾಗಿದೆ.
ಶಿವಮೊಗ್ಗ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್ ಸೇರಿದಂತೆ ಹಿರಿಯ ಅಧಿಕಾರಿಗಳ ಬಂಗಲೆಗಳಿರುವ ರಸ್ತೆ ಇದಕ್ಕೆ ಸಾಕ್ಷಿಯಾಗಿದೆ. ಜಿಲ್ಲಾಧಿಕಾರಿ ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಚರಂಡಿ ಕಾಮಗಾರಿ ನಡೆಸಲಾಗುತ್ತಿದೆ. ಅದರ ಪಕ್ಕದಲ್ಲಿ ನಾಲ್ಕು ವಿದ್ಯುತ್ ಕಂಬಗಳಿವೆ. ಇದೇ ಕಂಬಗಳ ಮೂಲಕ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪಾಲಿಕೆ ಆಯುಕ್ತರು, ಪಿಡಬ್ಲುಡಿ ಇಂಜಿನಿಯರ್ ಅವರ ನಿವಾಸಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ. ಈ ಕಂಬಗಳು ಚರಂಡಿ ನಡುವೆ ಬಂದಿದ್ದು ಮಾತ್ರ ವಿಪರ್ಯಾಸ.
ಮೂರು ಕಂಬಗಳು ಚರಂಡಿಯಲ್ಲಿ
ಸ್ಮಾರ್ಟ್ ಸಿಟಿ ಯೋಜನೆಯಡಿ ಜಯನಗರ ಬ್ಲಾಕ್ ನ ಚರಂಡಿ ಕಾಮಗಾರಿ ನಡೆಸಲಾಗುತ್ತಿದೆ. ಈ ಮೊದಲು ಈ ರಸ್ತೆಯಲ್ಲಿ ಚರಂಡಿ ಇರಲಿಲ್ಲ. ಇತ್ತೀಚಿಗೆ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಅದರ ಮೇಲೆ ಸ್ಲ್ಯಾಬ್ ಗಳನ್ನು ಅಳವಡಿಕೆ ಮಾಡಲಾಗಿದೆ. ಇಲ್ಲಿರುವ ನಾಲ್ಕು ವಿದ್ಯುತ್ ಕಂಬಗಳ ಪೈಕಿ ಮೂರು ಕಂಬಗಳು ಚರಂಡಿಯ ಮಧ್ಯದಲ್ಲಿದ್ದರೆ, ಒಂದು ಕಂಬ ಚರಂಡಿಯಿಂದ ಹೊರಗಿದ್ದರೂ ಅದಕ್ಕೆ ತಾಗಿಕೊಂಡೆ ಇದೆ.
ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡದೇ ಚರಂಡಿ ಕಾಮಗಾರಿಯನ್ನು ನಡೆಸಿದ್ದಾರೆ. ಆದರೆ ಅಧಿಕಾರಿಗಳು ಹಾಗೆ ಮಾಡದೇ ಕಂಬಗಳನ್ನು ಚರಂಡಿಯೊಳಗೆ ನಿಲ್ಲಿಸಿದ್ದಾರೆ. ಮಳೆ ಜೋರಾಗಿ ಬಂದರೆ ನೀರು ಸರಾಗವಾಗಿ ಹರಿದು ಹೋಗಲು ಕಂಬಗಳೇ ಅಡ್ಡಿಯಾಗಲಿವೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಕಂಬಗಳನ್ನು ಸ್ಥಳಾಂತರ ಮಾಡಬೇಕಾದರೆ ಈ ಚರಂಡಿಯನ್ನು ಒಡೆಯಬೇಕಾಗುತ್ತದೆ ಎಂದು ಸಾರ್ವಜನಿಕರ ಅನಿಸಿಕೆ.
ಜನರ ಅಭಿಪ್ರಾಯಕ್ಕೆ ಬೆಲೆ ಇಲ್ಲ
ಜನರ ಸಹಭಾಗಿತ್ವದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯಬೇಕೆಂಬ ನಿಯಮವಿದೆ. ಆದರೆ ಜನರನ್ನು ವಿಶ್ವಾಸಕ್ಕೆ ಪಡೆದುಕೊಳ್ಳದೆ ಕಾಮಗಾರಿ ನಡೆಯುತ್ತಿವೆ ಎಂಬ ಆರೋಪಕ್ಕೆ ಜಿಲ್ಲಾಧಿಕಾರಿ ಮನೆಯ ಮುಂದೆ ನಡೆದೆ ಸ್ಮಾರ್ಟ್ ಸಿಟಿ ಕಾಮಗಾರಿಯೆ ಸಾಕ್ಷಿಯಾಗಿದೆ. ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಸಬೇಕಾದರೆ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಬೇಕು ಎಂದು ಕೆಲವು ಸಂಘಟನೆಗಳು ಜಿಲ್ಲಾಡಳಿತ ಹಾಗೂ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.






.jpg)
.jpg)

