ಜಮ್ಮುಕಾಶ್ಮೀರ: ಶಂಕಿತ ಉಗ್ರರ ದಾಳಿ ಪ್ರಕರಣ; ಮತ್ತೋರ್ವ ಕೌನ್ಸಿಲರ್ ಸಾವು, ಮೃತಪಟ್ಟವರ ಸಂಖ್ಯೆ 3ಕ್ಕೆ ಏರಿಕೆ

ಹೊಸದಿಲ್ಲಿ, ಮಾ. 30: ಜಮ್ಮು ಹಾಗೂ ಕಾಶ್ಮೀರದ ಸೋಪೊರೆಯಲ್ಲಿ ಸೋಮವಾರ ಶಂಕಿತ ಉಗ್ರರ ದಾಳಿಯಲ್ಲಿ ಗಂಭೀರ ಗಾಯಗೊಂಡಿದ್ದ ನಗರ ಸಭೆಯ ಕೌನ್ಸಿಲರ್ ರಾತ್ರಿ ಮೃತಪಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಬಂಧಿಸಲಾಗಿದೆ.
ನಗರಸಭೆ ಕೌನ್ಸಿಲರ್ ಶಂಶುದ್ದೀನ್ ಪೀರ್ ಅವರು ಶ್ರೀನಗರದ ಶ್ರೀ ಮಹಾರಾಜ ಹರಿ ಸಿಂಗ್ ಆಸ್ಪತ್ರೆಯಲ್ಲಿ ಮೃತಪಟ್ಟ ಬಳಿಕ ಶಂಕಿತ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಕೌನ್ಸಿಲರ್ ರಿಯಾಝ್ ಅಹ್ಮದ್ ಹಾಗೂ ಪೊಲೀಸ್ ಅಧಿಕಾರಿ ಶಫ್ಕತ್ ಅಹ್ಮದ್ ಅವರು ಸೋಮವಾರ ಮೃತಪಟ್ಟಿದ್ದರು. ದಾಳಿಯ ಸಂದರ್ಭ ಪ್ರತಿದಾಳಿ ನಡೆಸಲು ವಿಫಲವಾದ ಹಿನ್ನೆಲೆಯಲ್ಲಿ ಕೌನ್ಸಿಲರ್‌ಗಳಿಗೆ ಭದ್ರತೆ ನೀಡುತ್ತಿದ್ದ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಐಜಿಪಿ ವಿಜಯ ಕುಮಾರ್ ಹೇಳಿದ್ದಾರೆ.
ಇಲ್ಲಿ ಭದ್ರತಾ ಕೊರತೆ ಕಂಡು ಬಂದಿದೆ. ನಾಲ್ವರು ವೈಯುಕ್ತಿಕ ಭದ್ರತಾ ಅಧಿಕಾರಿಗಳು ಪ್ರತಿದಾಳಿ ನಡೆಸಿದ್ದರೆ, ಉಗ್ರರ ಪ್ರಯತ್ನ ಯಶಸ್ವಿಯಾಗುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ. ಬಂಧಿತ ವ್ಯಕ್ತಿ ಉಗ್ರ ಸಂಘಟನೆಯ ಮೇಲ್ಮಟ್ಟದ ಕಾರ್ಯಕರ್ತ. ಸ್ಥಳೀಯ ಲಷ್ಕರೆ ತಯ್ಯಿಬ ಹಾಗೂ ವಿದೇಶಿ ಉಗ್ರರು ಈ ದಾಳಿ ಯೋಜಿಸಿದ್ದರು ಎಂದು ಬಂಧಿತ ಯುವಕ ಬಹಿರಂಗಪಡಿಸಿದ್ದಾನೆ ಎಂದು ಅವರು ತಿಳಿಸಿದ್ದಾರೆ. ನಗರ ಸಭೆಯ ಸಭೆ ಬಗ್ಗೆ ಪೊಲೀಸರು ಮಾಹಿತಿ ನೀಡದೇ ಇದ್ದುದರಿಂದ ಹೆಚ್ಚುವರಿ ಭದ್ರತೆಯನ್ನು ಪೂರೈಸಿರಲಿಲ್ಲ ಎಂದು ಅವರು ಹೇಳಿದ್ದಾರೆ.







