ಬಾಬಾಬುಡನ್‍ಗಿರಿ: ಸಂದಲ್ ಉರೂಸ್‍ಗೆ ಅವಕಾಶ ನೀಡದ ಜಿಲ್ಲಾಡಳಿತ
ಜಿಲ್ಲಾಡಳಿತದ ವಿರುದ್ಧ ಶಾಖಾದ್ರಿ ಅಸಮಾಧಾನ

ಚಿಕ್ಕಮಗಳೂರು, ಮಾ.30: ಬಾಬಾ ಬುಡನ್‍ಗಿರಿ ದರ್ಗಾದಲ್ಲಿ ನಡೆಯುವ ಉರೂಸ್ ಅಂಗವಾಗಿ ಸೋಮವಾರ ನಡೆಯಬೇಕಿದ್ದ ಸಂದಲ್ ಉರೂಸ್‍ಅನ್ನು ಶಾಖಾದ್ರಿ ನೇತೃತ್ವದಲ್ಲಿ ನಡೆಸಲು ಜಿಲ್ಲಾಡಳಿತ ನಿರಾಕರಿಸಿದ್ದು, ಅನುಮತಿ ನೀಡದ ಹಿನ್ನೆಲೆಯಲ್ಲಿ ಶಾಖಾದ್ರಿ ನೇತೃತ್ವದಲ್ಲಿ ಭಕ್ತರು ದರ್ಗಾದ ಎದುರು ಕೆಲ ಹೊತ್ತು ಧರಣಿ ನಡೆಸಿ ಜಿಲ್ಲಾಡಳಿತದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಬಾಬಾ ಬುಡನ್‍ಗಿರಿ ಉರೂಸ್ ಹಿನ್ನೆಲೆಯಲ್ಲಿ ಶಾಖಾದ್ರಿ ಅವರು ಚಿಕ್ಕಮಗಳೂರು ನಗರದಿಂದ ಅತ್ತಿಗುಂಡಿ ಮಾರ್ಗವಾಗಿ ಬಾಬಾ ಬುಡನ್‍ಗಿರಿಗೆ ಸಂದಲ್(ಗಂಧ) ಕೊಂಡೊಯ್ದಿದ್ದರು. ಗಿರಿ ಆವರಣದಲ್ಲಿ ಶಾಖಾದ್ರಿ ತನ್ನ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳನ್ನು ನಡೆಸಲು ಅವಕಾಶ ನೀಡಬೇಕು, ಗಂಧ ಲೇಪನ ಸೇರಿದಂತೆ ಗೋರಿಗಳಿಗೆ ಹಸಿರು ಹೊದಿಕೆ ಹಾಕಲು ಅವಕಾಶ ನೀಡಬೇಕೆಂದು ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಬಳಿ ಕೇಳಿಕೊಂಡರು. ಆದರೆ ನ್ಯಾಯಾಲಯದ ಆದೇಶದಂತೆ ಶಾಖಾದ್ರಿಗೆ ಧಾರ್ಮಿಕ ವಿಧಿಗಳನ್ನು ಕೈಗೊಳ್ಳಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಶಾಖಾದ್ರಿಯ ಪ್ರಸ್ತಾವವನ್ನು ತಿರಸ್ಕರಿಸಿದರು.
ಈ ವೇಳೆ ಮಾತನಾಡಿದ ಶಾಖಾದ್ರಿ, ಅನಾದಿಕಾಲದಿಂದಲೂ ಶಾಖಾದ್ರಿ ನೇತೃತ್ವದಲ್ಲಿಯೇ ಉರೂಸ್‍ನ ಧಾರ್ಮಿಕ ವಿಧಿಗಳನ್ನು ಆಚರಿಸಿಸುವುದು ಸಂಪ್ರದಾಯವಾಗಿದೆ. ಇದು 1976ಕ್ಕೂ ಹಿಂದಿನ ಆಚರಣೆಯಾಗಿದೆ. ನ್ಯಾಯಾಲಯ ಹಾಗೂ ಸರಕಾರದ ಆದೇಶದಲ್ಲಿ 1975ಕ್ಕೂ ಹಿಂದಿನ ಆದೇಶ ಪಾಲಿಸಲು ತಿಳಿಸಲಾಗಿದೆ. ಉರೂಸ್ ಆಚರಣೆ 1975ಕ್ಕೂ ಮುಂಚಿನ ಆಚರಣೆಯಾಗಿದ್ದು, ಇದಕ್ಕೆ ಅವಕಾಶ ನೀಡಬೇಕೆಂದು ಮನವಿ ಮಾಡಿದರೂ ಜಿಲ್ಲಾಡಳಿತ ಇದಕ್ಕೆ ಅವಕಾಶ ನೀಡಲಿಲ್ಲ.
ನಂತರ ಶಾಖಾದ್ರಿ ನೇತೃತ್ವದಲ್ಲಿ ಸಾವಿರಾರು ಸೂಫಿ ಪಂಥದ ಭಕ್ತರು, ಫಕೀರರು ಬಾಬಾಬುಡನ್‍ಗಿರಿ ದರ್ಗಾದ ಗೇಟ್ ಎದುರು ಜಿಲ್ಲಾಡಳಿತದ ಕ್ರಮ ಖಂಡಿಸಿ ಧರಣಿ ನಡೆಸಿದರು. ಬಳಿಕ ಜಿಲ್ಲಾಡಳಿಕ್ಕೆ ಮನವಿ ಸಲ್ಲಿಸಿ ಸಂದಲ್‍ನೊಂದಿಗೆ ಅತ್ತಿಗುಂಡಿಗೆ ಹಿಂದಿರುಗಿದರು.
ಉರೂಸ್ ಹಿನ್ನೆಲೆಯಲ್ಲಿ ವಿವಿಧೆಡೆಯಿಂದ ಆಗಮಿಸಿದ್ದ ಸೂಫಿ ಸಂತರು ಹಾಗೂ ಬೆಂಗಳೂರಿನ ಸರ್ವ ಧರ್ಮ ಪೀಠದ ಸಂಗಮ್ ಆನಂದ್ ಸ್ವಾಮೀಜಿ ಉರೂಸ್ ಹಿನ್ನೆಲೆಯಲ್ಲಿ ಬಾಬಾ ಬುಡನ್‍ಗಿರಿಗೆ ಭೇಟಿ ನೀಡಿದ್ದರು. ಸೂಫಿ ಪಂಥದ ಐದು ಧಾರ್ಮಿಕ ಕೇಂದ್ರಗಳ ಮುಖ್ಯಸ್ಥರು ಉರೂಸ್ ಹಿನ್ನೆಲೆಯಲ್ಲಿ ಗಿರಿಗೆ ಭೇಟಿ ನೀಡಿದ್ದರು. ಮುಸ್ಲಿಂ ಸಂಘಟನೆಗಳ ಮುಖಂಡ ಯೂಸೂಫ್ ಹಾಜಿ ಸೇರಿದಂತೆ ಸಮುದಾಯದ ಅನೇಕ ಮುಖಂಡರು ಈ ವೇಳೆ ಉಪಸ್ಥಿತರಿದ್ದರು.
ಉರೂಸ್ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆ, ಹೊರ ರಾಜ್ಯಗಳಿಂದ ಆಗಮಿಸಿರುವ ಸಾವಿರಾರು ಸೂಫಿ ಪಂಥದ ಅನುಯಾಯಿಗಳು, ಫಕೀರರು ಮಂಗಳವಾರ ಧಾರ್ಮಿಕ ಸಭೆ ನಡೆಸಿದ್ದು, ಬುಧವಾರ ನಾಗೇನಹಳ್ಳಿ ದರ್ಗಾದಲ್ಲಿ ಉರೂಸ್ ಕಾರ್ಯಕ್ರಮ ನಡೆಯಲಿದೆ.
ಉರೂಸ್ ಹಿನ್ನೆಲೆಯಲ್ಲಿ ಬಾಬಾ ಬಡನ್‍ಗಿರಿ ಆವರಣದಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ದರ್ಗಾದ ದರ್ಶನ ಪಡೆದರು. ಸ್ಥಳದಲ್ಲಿ ಜಿಲ್ಲಾಧಿಕಾರಿಯೊಂದಿಗೆ ಎಸ್ಪಿ ಅಕ್ಷಯ್ ಎಂ.ಎಚ್., ಅಪರ ಜಿಲ್ಲಾಧಿಕಾರಿ ರೂಪಾ ಸೇರಿದಂತೆ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಬಾಬಾ ಬುಡನ್‍ಗಿರಿ ಹಿಂದೂ ಮುಸ್ಲಿಂ ಧರ್ಮಗಳ ಸೌಹಾರ್ದದ ಸಂಕೇತವಾಗಿದೆ. ಇಲ್ಲಿಗೆ ಎರಡು ಧರ್ಮಗಳ ಭಕ್ತರು ನಡೆದುಕೊಳ್ಳುತ್ತಿರುವುದು ಅನಾದಿಕಾಲದ ಸಂಪ್ರದಾಯವಾಗಿದೆ. ಇಲ್ಲಿನ ಸೌಹಾರ್ದ ವಾತಾವರಣ ಹಿಂದಿನಂತೆಯೇ ಇರಬೇಕು. ಇಂತಹ ಸೌಹಾರ್ದ ಧಾರ್ಮಿಕ ಕೇಂದ್ರದ ವಿಚಾರದಲ್ಲಿ ರಾಜಕಾರಣ ಮಾಡುತ್ತಾ ಕೋಮುಸಾಮರಸ್ಯ ಕದಡುವ ಕೆಲಸ ಯಾರೇ ಮಾಡಿದರೂ ತಪ್ಪು.
- ಸಂಗಮ್ ಆನಂದ್ ಸ್ವಾಮೀಜಿ, ಸರ್ವಧರ್ಮ ಪೀಠ, ಬೆಂಗಳೂರು







