ಸೊಮವಾರಪೇಟೆಯಲ್ಲಿ ಕಾಡಾನೆ ದಾಳಿ: ಶಾಲೆಯ ಸ್ವಾಗತ ಕಮಾನು, ಕಾಂಪೌಂಡ್ ಧ್ವಂಸ

ಮಡಿಕೇರಿ, ಮಾ.30: ಸೊಮವಾರಪೇಟೆ ತಾಲೂಕಿನ ಗಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು ಗೋಣಿಮರೂರು ಪ್ರಾಥಮಿಕ ಶಾಲೆಯ ಕಾಂಪೌಂಡ್ ಮೇಲೆ ಕಾಡಾನೆಗಳ ಹಿಂಡು ದಾಳಿ ನಡೆಸಿದೆ.
ಮಂಗಳವಾರ ಬೆಳಗಿನ ಸುಮಾರು 3 ಗಂಟೆಗೆ ದಾಳಿ ನಡೆಸಿರುವ ಕಾಡಾನೆಗಳು ಶಾಲೆಯ ಕಾಂಪೌಂಡ್ ಮತ್ತು ಗೇಟ್‍ಗಳನ್ನು ತುಳಿದು ಮುರಿದು ಹಾಕಿವೆ. ಶಾಲೆಯ ಸ್ವಾಗತ ಕಮಾನು ಮತ್ತು ಕಾಂಪೌಂಡ್ ಧ್ವಂಸವಾಗಿದೆ.
ಆನೆಗಳ ದಾಳಿಯಿಂದ ಮಕ್ಕಳಿಗೂ ಜೀವ ಭಯ ಕಾಡುತ್ತಿದ್ದು, ಶಾಲೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಮಾತ್ರವಲ್ಲದೇ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಕೂಡ ಭಯಪಡುವಂತಹ ಸ್ಥಿತಿಯೂ ನಿರ್ಮಾಣವಾಗಿದೆ. ಸರಕಾರಿ ಶಾಲೆಯ ಆಸ್ತಿಗೂ ಹಾನಿಯಾಗಿದ್ದು, ಅರಣ್ಯ ಇಲಾಖೆಯೇ ನಷ್ಟ ಭರಿಸಬೇಕು ಎಂದು ಶಾಲೆಯ ಎಸ್.ಡಿ.ಎಂ.ಸಿ ಆಡಳಿತ ಮಂಡಳಿ ಆಗ್ರಹಿಸಿದೆ.
ಸಂಜೆಯಾಗುತ್ತಲೇ ಕಾಡಿನಿಂದ ನಾಡಿಗೆ ಬರುವ ಕಾಡಾನೆಗಳು ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಅಡ್ಡಗಟ್ಟಿ ಭಯದ ವಾತಾವರಣ ನಿರ್ಮಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆನೆಗಳ ಉಪಟಳದಿಂದ ಸಾರ್ವಾಜನಿಕರ ಓಡಾಟಕ್ಕೂ ಕಷ್ಟಕರವಾಗಿದ್ದು ಉಪಟಳ ನೀಡುತ್ತಿರುವ ಕಾಡಾನೆಗಳಿಂದ ಮುಕ್ತಿ ನೀಡುವಂತೆ ಗೋಣಿಮರೂರು ಪ್ರಾಥಮಿಕ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಕೆ.ಡಿ. ಅನಿಲ್ ಕುಮಾರ್ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಈ ವ್ಯಾಪ್ತಿಯಲ್ಲಿ ನಿರಂತರವಾಗಿ ಕಾಡಾನೆಗಳು ರೈತರ ಕೃಷಿ ಭೂಮಿಗಳಿಗೆ ದಾಳಿ ನಡೆಸುವ ಮೂಲಕ ಕೃಷಿ ಫಸಲುಗಳನ್ನು ತಿಂದು ನಷ್ಟ ಮಾಡುತ್ತಿದೆ ಎಂದು ಈ ಭಾಗದ ರೈತರು ಆರೋಪಿಸಿದ್ದಾರೆ. ಕೊಡಗಿನಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಕೃಷಿ ಫಸಲು ಸೇರಿದಂತೆ ಮಾನವ ಜೀವ ಹಾನಿ ಪ್ರಕರಣಗಳಿಗೂ ಕಾರಣವಾಗುತ್ತಿವೆ.







