ನ್ಯೂಝಿಲ್ಯಾಂಡ್‌ಗೆ 28 ರನ್‌ಗಳ ಜಯ
3 ಪಂದ್ಯಗಳ ಸರಣಿಯಲ್ಲಿ ಕಿವೀಸ್ 2-0 ಅಂತರದಲ್ಲಿ ಸರಣಿ ಕೈವಶ

ನೇಪಿಯರ್: ನೇಪಿಯರ್‌ನಲ್ಲಿ ಮಂಗಳವಾರ ನಡೆದ ಎರಡನೇ ಟ್ವೆಂಟಿ -20 ಪಂದ್ಯದಲ್ಲಿ ಡಕ್ವರ್ತ್ ಲೂಯಿಸ್ ವಿಧಾನದಲ್ಲಿ ಬಾಂಗ್ಲಾದೇಶ ವಿರುದ್ಧ ನ್ಯೂಝಿಲ್ಯಾಂಡ್ 28 ರನ್‌ಗಳ ಜಯ ಗಳಿಸಿದೆ. ಮೆಕ್ಲೀನ್ ಪಾರ್ಕ್‌ನಲ್ಲಿ ಸುರಿದ ಮಳೆಯ ಕಾರಣದಿಂದಾಗಿ ನ್ಯೂಝಿಲ್ಯಾಂಡ್ 17.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 173 ರನ್ ಗಳಿಸಿತು. ಗೆಲುವಿಗೆ 16 ಓವರ್‌ಗಳಲ್ಲಿ 171 ರನ್ ಗಳಿಸಬೇಕಾದ ಬಾಂಗ್ಲಾದೇಶ ತಂಡ 16 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 142 ರನ್ ಗಳಿಸಿತು.
ಸೌಮ್ಯಾ ಸರ್ಕಾರ್ 27 ಎಸೆತಗಳಲ್ಲಿ 51 ರನ್ ಗಳಿಸಿದರು ಮತ್ತು ಓಪನರ್ ಮುಹಮ್ಮದ್ ನಯೀಮ್ 38 ರನ್ ಗಳಿಸಿದರು. ಇವರು ಎರಡನೇ ವಿಕೆಟ್‌ಗೆ 81 ರನ್‌ಗಳ ಜೊತೆಯಾಟ ನೀಡಿದರು.
ವೇಗಿ ಆ್ಯಡಮ್ ಮಿಲ್ನೆ (34ಕ್ಕೆ 2) ಮೂರು ಎಸೆತಗಳ ಅಂತರದಲ್ಲಿ ಬಾಂಗ್ಲಾದೇಶದ ನಾಯಕ ಮಹಮ್ಮದುಲ್ಲಾ ಮತ್ತು ಅಫಿಫ್ ಹುಸೈನ್ ಅವರನ್ನು ಪೆವಿಲಿಯನ್‌ಗೆ ಅಟ್ಟುವ ಮೂಲಕ ಕಿವೀಸ್‌ಗೆ ಅನುಕೂಲ ಮಾಡಿದರು. ಇದಕ್ಕೂ ಮೊದಲು ಗ್ಲೆನ್ ಫಿಲಿಪ್ಸ್ 31 ಎಸೆತಗಳಲ್ಲಿ 58 ರನ್ ಗಳಿಸಿ ನ್ಯೂಝಿಲ್ಯಾಂಡ್‌ನ ಇನಿಂಗ್ಸ್‌ಗೆ ಜೀವ ತುಂಬಿದರು. ಬಾಂಗ್ಲಾ ಬೌಲರ್‌ಗಳು ನ್ಯೂಝಿಲ್ಯಾಂಡ್ ಬ್ಯಾಟ್ಸ್ ಮನ್‌ಗಳನ್ನು ಕಾಡಿದರು. ಡ್ಯಾರಿಲ್ ಮಿಚೆಲ್ (ಔಟಾಗದೆ 34) ಮತ್ತು ಫಿಲಿಪ್ಸ್ 62 ರನ್‌ಗಳ ಜೊತೆಯಾಟ ನೀಡಿ ನ್ಯೂಝಿಲ್ಯಾಂಡ್‌ನ ಸ್ಕೋರ್ 200 ರನ್‌ಗಳ ಗಡಿ ದಾಟಲು ನೆರವಾದರು. ಸರಣಿಯ ಅಂತಿಮ ಪಂದ್ಯ ಗುರುವಾರ ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆಯುತ್ತದೆ.







