ಮಣಿಪಾಲ: ಬಡಗಬೆಟ್ಟು ಗ್ರಾಪಂ ಸ್ವಚ್ಚತಾ ಕಾರ್ಮಿಕರಿಗೆ ಕಲ್ಲಿನಿಂದ ಹಲ್ಲೆ; ಆರೋಪ
ಮಣಿಪಾಲ: 80ಬಡಗಬೆಟ್ಟು ಗ್ರಾಮದ ಕಸ ನಿರ್ವಹಣಾ ಘಟಕದ ಸ್ವಚ್ಚತಾ ಕಾರ್ಮಿಕರಿಗೆ ಕಲ್ಲಿನಿಂದ ಹಲ್ಲೆ ಮಾಡಿದ್ದಾರೆನ್ನಲಾದ ಘಟನೆ ಮಾ.30 ರಂದು ಸಂಜೆ 5.30ರ ಸುಮಾರಿಗೆ ನೇತಾಜಿನಗರ ಎಂಬಲ್ಲಿ ನಡೆದಿದೆ.
ಹಲ್ಲೆಗೆ ಒಳಗಾದವರನ್ನು ಅಲೆವೂರು ಮಂಚಿಯ ರಂಗ(55) ಹಾಗೂ ಸಂತೋಷ್ ಎಂದು ಗುರುತಿಸಲಾಗಿದೆ. ಇವರು ಇತರೆ ನಾಲ್ವರು ಕಾರ್ಮಿಕರೊಂದಿಗೆ ವಾಹನದಲ್ಲಿ ಕಸ ತುಂಬಿಸಿಕೊಂಡು ಟ್ಯಾಪ್ಮಿ ರಸ್ತೆಯಿಂದಾಗಿ ನೇತಾಜಿ ನಗರಕ್ಕೆ ಹೋಗಿದ್ದು, ಅಲ್ಲಿ ಗಣೇಶ್ ಎಂಬಾತ ಕಸ ಸಾಗಾಟದ ವಾಹನಕ್ಕೆ ತನ್ನ ಬೈಕ್‌ನ್ನು ಅಡ್ಡವಾಗಿ ನಿಲ್ಲಿಸಿದ ಎನ್ನಲಾಗಿದೆ.
ಬಳಿಕ ವಾಹನದಲ್ಲಿದ್ದ 6 ಮಂದಿ ಸ್ವಚ್ಚತಾ ಕಾರ್ಮಿಕರನ್ನು ವಾಹನದಿಂದ ಕೆಳಗಿಳಿಸಿ ಅವಾಚ್ಯ ಶಬ್ದಗಳಿಂದ ಬೈದಿದ್ದಲ್ಲದೆ ಕಲ್ಲಿನಿಂದ ರಂಗ ಹಾಗೂ ಸಂತೋಷ್ ಎಂಬವರಿಗೆ ಹೊಡೆದು ಇನ್ನು ಮುಂದೆ ಈ ರಸ್ತೆಯಲ್ಲಿ ಕಸ ತೆಗೆದುಕೊಂಡು ಬಂದರೆ ನಿಮ್ಮನ್ನೆಲ್ಲ ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಒಡ್ಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





