ಬಿಜೆಪಿ ಶಾಸಕನಿಗೆ ಹಲ್ಲೆ ಪ್ರಕರಣ: ಆರೋಪಿಗಳಿಗೆ ಉಚಿತ ಕಾನೂನು ನೆರವು; ವಕೀಲರ ಘೋಷಣೆ

ಅಮೃತಸರ, ಮಾ.31: ಬಿಜೆಪಿ ಶಾಸಕ ಅರುಣ್ ನಾರಂಗ್‌ಗೆ ಹಲ್ಲೆ ನಡೆಸಿದ ಆರೋಪಿಗಳಿಗೆ ಉಚಿತವಾಗಿ ಕಾನೂನು ನೆರವು ಒದಗಿಸುವುದಾಗಿ ಮುಕ್ತ್‌ಸರ್ ಮತ್ತು ಬಟಿಂಡಾ ಜಿಲ್ಲೆಯ 20 ವಕೀಲರು ಹೇಳಿದ್ದಾರೆ.
ಶಾಸಕರ ಬಟ್ಟೆ ಹರಿದು ಹಲ್ಲೆ ನಡೆಸಿರುವ ಪ್ರಕರಣದ ಬಗ್ಗೆ ದೇಶದಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಆದರೆ ಘಟನೆಯ ಬಗ್ಗೆ ಸರಕಾರದ ಕಾರ್ಯವೈಖರಿ ಹಾಗೂ ಪೂರ್ವಭಾವಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಪೊಲೀಸರು ವಿಫಲವಾಗಿರುವುದನ್ನು ಖಂಡಿಸಿ, ಆರೋಪಿಗಳಿಗೆ ಉಚಿತ ಕಾನೂನು ನೆರವು ಒದಗಿಸಲು ನಿರ್ಧರಿಸಲಾಗಿದೆ ಎಂದು ರಾಂಪುರ ವಕೀಲರ ಸಂಘದ ಅಧ್ಯಕ್ಷ ನ್ಯಾಯವಾದಿ ಅಜಿತ್‌ಪಾಲ್ ಸಿಂಗ್ ಮಂದೇರ್ ಹೇಳಿದ್ದಾರೆ.
ದೇಶದಾದ್ಯಂತ ಜನಸಮೂಹದ ಮನೋಭಾವ ಹೆಚ್ಚುತ್ತಿದ್ದು, ಜನಸಮೂಹ ಕಾನೂನನ್ನು ಕೈಗೆತ್ತಿಕೊಳ್ಳಲು ಪೊಲೀಸರು ಅವಕಾಶ ನೀಡಬಾರದು. ಜನಸಮೂಹ ಒಂದೆಡೆ ಸೇರಿದಾಗ ತಕ್ಷಣ ಅವರನ್ನು ಚದುರಿಸಬೇಕು. ಆದರೆ ಈ ಪ್ರಕರಣದಲ್ಲಿ ಪೊಲೀಸರು ಉದ್ದೇಶಪೂರ್ವಕವಾಗಿ ಯಾವ ಕ್ರಮಗಳನ್ನೂ ಕೈಗೊಂಡಿಲ್ಲ. ಇದು ರಾಜ್ಯ ಸರಕಾರದ ಆಡಳಿತ ಯಂತ್ರದ ವೈಫಲ್ಯವಾಗಿದೆ. ಬಿಜೆಪಿ ಮುಖಂಡರು ಕೆರಳಿಸುವ ಹೇಳಿಕೆ ನೀಡಿದ ಬಳಿಕ ನೆಲೆಸಿದ್ದ ಪರಿಸ್ಥಿತಿಯನ್ನು ಗಮನಿಸಿ ಪೊಲೀಸರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿತ್ತು ಎಂದು ಅಜಿತ್‌ಪಾಲ್ ಸಿಂಗ್ ಮಂದೇರ್ ಹೇಳಿದ್ದಾರೆ.
ಅಲ್ಲದೆ ಪ್ರಕರಣದಲ್ಲಿ ಸಲ್ಲಿಸಿರುವ ಎಫ್‌ಐಆರ್‌ನಲ್ಲಿ ಕೊಲೆಯತ್ನ ಎಂದು ಉಲ್ಲೇಖಿಸಲಾಗಿದೆ. ಆದರೆ ಬಟ್ಟೆ ಹರಿದು ಮುಖಕ್ಕೆ ಬಸಿ ಬಳಿದಿರುವುದು, ಒಬ್ಬ ವ್ಯಕ್ತಿಯನ್ನು ಅಪಮಾನಗೊಳಿಸುವ ಉದ್ದೇಶದಿಂದ ಹಲ್ಲೆ ನಡೆಸಿರುವ ಸೆಕ್ಷನ್‌ನಡಿ ಬರುತ್ತದೆ ಎಂದವರು ಹೇಳಿದ್ದಾರೆ. ನಾಲ್ಕು ದಿನದ ಹಿಂದೆ ನಡೆದ ಘಟನೆ ಇದಾಗಿದೆ. ಬಿಜೆಪಿ ಶಾಸಕ ಅರುಣ್ ನಾರಂಗ್ ಸುದ್ದಿಗೋಷ್ಟಿ ನಡೆಸುವುದನ್ನು ವಿರೋಧಿಸಿ ರೈತರ ಗುಂಪೊಂದು ಪ್ರತಿಭಟನೆ ನಡೆಸಿದ್ದು ಈ ಸಂದರ್ಭ ನಾರಂಗ್‌ರ ಮೇಲೆ ಹಲ್ಲೆ ನಡೆಸಿ ಮುಖಕ್ಕೆ ಮಸಿ ಬಳಿಯಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆಯ ಹಿನ್ನೆಲೆಯಲ್ಲಿ ರೈತ ಮುಖಂಡರ ಸಹಿತ 7 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.







