ಕುಲಪತಿ ಹುದ್ದೆ ಕೊಡಿಸುವುದಾಗಿ ವಂಚಿಸಿದ ಪ್ರಕರಣ: ಪ್ರಸಾದ್ ಅತ್ತಾವರನ ಸಹಚರರಿಗಾಗಿ ಶೋಧ

ಪ್ರಸಾದ್ ಅತ್ತಾವರ
ಮಂಗಳೂರು, ಮಾ.31: ರಾಯಚೂರು ವಿಶ್ವವಿದ್ಯಾನಿಲಯದ ಕುಲಪತಿ ಹುದ್ದೆ ಕೊಡಿಸುವುದಾಗಿ ಹೇಳಿ ಮಂಗಳೂರು ವಿವಿಯ ಪ್ರಾಧ್ಯಾಪಕ ಡಾ. ಜೈಶಂಕರ್ ಅವರಿಂದ ಹಣ ಪಡೆದು ವಂಚಿಸಿದ್ದಲ್ಲದೆ ಜೀವ ಬೆದರಿಕೆ ಹಾಕಿದ ಪ್ರಮುಖ ಆರೋಪಿ ರಾಮಸೇನೆಯ ಪ್ರಸಾದ್ ಅತ್ತಾವರನ ನಾಲ್ವರು ಸಹಚರರ ಬಂಧನಕ್ಕಾಗಿ ಕಂಕನಾಡಿ ನಗರ ಠಾಣೆಯ ಪೊಲೀಸರು ಶೋಧ ಮುಂದುವರಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟ ಪ್ರಸಾದ್ ಅತ್ತಾವರನನ್ನು ಮೂರು ದಿನಗಳ ಕಸ್ಟಡಿ ಕೇಳಿದ್ದ ಪೊಲೀಸರು ಹೆಚ್ಚಿನ ತನಿಖೆಗಾಗಿ ಬೆಂಗಳೂರಿಗೆ ಕರೆದೊಯ್ದು ವಿಚಾರಣೆ ತೀವ್ರಗೊಳಿಸಿದ್ದಾರೆ.
ಪ್ರಸಾದ್ ಅತ್ತಾವರನು ಮಂಗಳೂರು ವಿವಿಯ ಪ್ರಾಧ್ಯಾಪಕ ಡಾ.ಜೈಶಂಕರ್ ಅವರಿಂದ ರಾಯಚೂರು ವಿವಿಯ ಕುಲಪತಿ ಹುದ್ದೆ ಕೊಡಿಸುವುದಾಗಿ ಹೇಳಿ 17.50 ಲಕ್ಷ ರೂ. ಪಡೆದು ವಂಚಿಸಿದ್ದ. ಹುದ್ದೆಯನ್ನೂ ಕೊಡಿಸದೆ, ಹಣವನ್ನೂ ಮರಳಿಸದೆ ಜೀವ ಬೆದರಿಕೆ ಹಾಕಿದ್ದ. ಈ ಬಗ್ಗೆ ಡಾ.ಜೈಶಂಕರ್ ನೀಡಿದ್ದ ದೂರಿನಂತೆ ಕಂಕನಾಡಿ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಮಂಗಳೂರು ವಿವಿ ಪ್ರಾಧ್ಯಾಪಕರು ಮತ್ತು ಪ್ರಸಾದ್ ಅತ್ತಾವರನ ನಡುವೆ ಮಧ್ಯಸ್ಥಿಕೆ ವಹಿಸಿದ್ದ ವಿವೇಕ್ ಆಚಾರ್ಯ, ಗೋಪಾಲಕೃಷ್ಣ, ಭರತ್, ಮಂಜು ವಿರುದ್ಧವೂ ಪ್ರಕರಣ ದಾಖಲಿಸಿರುವ ಪೊಲೀಸರು ನಾಲ್ವರ ಬಂಧನಕ್ಕಾಗಿ ಶೋಧ ನಡೆಸುತ್ತಿದ್ದಾರೆ. ಈ ಪೈಕಿ ಒಬ್ಬ ಆರೋಪಿ ಬೆಂಗಳೂರು ಮೂಲದವ ಎಂದು ತಿಳಿದು ಬಂದಿದೆ.







