ರಾತ್ರಿ ವೇಳೆ ರೈಲುಗಳಲ್ಲಿ ಮೊಬೈಲ್ ಚಾರ್ಜಿಂಗ್ ನಿಷೇಧ

ಹೊಸದಿಲ್ಲಿ,ಮಾ.31: ರೈಲುಗಳಲ್ಲಿ ರಾತ್ರಿ 11:00 ಗಂಟೆಯಿಂದ ಮುಂಜಾನೆ 5:00 ಗಂಟೆಯವರೆಗೆ ಪ್ರಯಾಣಿಕರು ಮೊಬೈಲ್ ಫೋನ್ ಸೇರಿದಂತೆ ತಮ್ಮ ಇಲೆಕ್ಟ್ರಾನಿಕ್ ಉಪಕರಣಗಳಿಗೆ ವಿದ್ಯುತ್ ಚಾರ್ಜಿಂಗ್ ಮಾಡುವುದಕ್ಕೆ ಅವಕಾಶ ನೀಡದಿರಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಅಗ್ನಿ ಆಕಸ್ಮಿಕದ ಘಟನೆಗಳು ಸಂಭವಿಸುವುದನ್ನು ತಡೆಗಟ್ಟುವ ಉದ್ದೇಶದಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ರೈಲುಗಳಲ್ಲಿರುವ ಚಾರ್ಜಿಂಗ್ ಪಾಯಿಂಟ್‌ಗಳಿಗೆ ವಿದ್ಯುತ್‌ಪೂರೈಕೆಯನ್ನು ಈ ಅವಧಿಯಲ್ಲಿ ಕಡಿತಗೊಳಿಸುವುದನ್ನು ಭಾರತೀಯ ರೈಲ್ವೆ ಮಾರ್ಚ್ 16ರಿಂದ ಜಾರಿಗೆ ತಂದಿದೆ ಎಂದು ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಮಿತ್ ಠಾಕೂರ್ ತಿಳಿಸಿದ್ದಾರೆ.
ಧೂಮಪಾನ ಹಾಗೂ ದಹನಕಾರಿ ಸಾಮಾಗ್ರಿಗಳನ್ನು ಪ್ರಯಾಣಿಕರು ಕೊಂಡೊಯ್ಯುವುದರ ವಿರುದ್ಧವೂ ಭಾರತೀಯ ರೈಲ್ವೆ ಹಲವಾರು ಉಪಕ್ರಮಗಳನ್ನು ಘೋಷಿಸಿದೆ. ರೈಲ್ವೆ ಸುರಕ್ಷತೆಗೆ ಸಂಬಂಧಿಸಿ ರೈಲ್ವೆ ಬಳಕೆದಾರರು ಹಾಗೂ ಉದ್ಯೋಗಿಗಳು ಮತ್ತಿತರರಿಗೆ 7 ದಿನಗಳ ಜಾಗೃತಿ ಅಭಿಯಾನವನ್ನು ನಡೆಸುವಂತೆಯೂ ಭಾರತೀಯ ರೈಲ್ವೆಯು ಈಗಾಗಲೇ ವಲಯ ರೈಲ್ವೆ ಇಲಾಖೆಗಳಿಗೆ ಸೂಚನೆ ನೀಡಿದೆ.
ಕೆಲವು ರೈಲುಗಳಲ್ಲಿ ಅಗ್ನಿ ಅವಘಡದ ಘಟನೆಗಳು ವರದಿಯಾದ ಹಿನ್ನೆಲೆಯಲ್ಲಿ ರೈಲ್ವೆ ಈ ಸೂಚನೆಗಳನ್ನು ಜಾರಿಗೊಳಿಸಿದೆ. ಇಲೆಕ್ಟ್ರಾನಿಕ್ ಉಪಕರಣಗಳಲ್ಲಿ ಓವರ್ ಚಾರ್ಜಿಂಗ್‌ನಿಂದಾಗಿ ಅಲ್ಪಪ್ರಮಾಣದ ಬೆಂಕಿ ಆಕಸ್ಮಿಕ ಹಲವಾರು ಘಟನೆಗಳು ಸಂಭವಿಸಿರುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.