2021-22ನೇ ಸಾಲಿನಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರ ಶೇ.7.5- ಶೇ.12.5: ವಿಶ್ವ ಬ್ಯಾಂಕ್ ವರದಿ ಅಂದಾಜು

ಹೊಸದಿಲ್ಲಿ, ಮಾ.31: 2021-22ನೇ ಸಾಲಿನ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯು ಶೇ.7.5ರಿಂದ ಶೇ.12.5ರ ನಡುವೆ ಇರಲಿದೆಯೆಂದು ಬುಧವಾರ ಬಿಡುಗಡೆಯಾದ ವಿಶ್ವಬ್ಯಾಂಕ್ ವರದಿಯೊಂದು ಅಂದಾಜಿಸಿದೆ.
ಕೊರೋನ ವೈರಸ್ ಸಾಂಕ್ರಾಮಿಕದ ಹಾವಳಿಯಿಂದ ಆರ್ಥಿಕತೆಯ ಮೇಲೆ ಉಂಟಾಗಿರುವ ಪ್ರತಿಕೂಲ ಪರಿಣಾಮದಿಂದ ಭಾರತವು ಮೈಕೊಡವಿ ಕೊಂಡು ಎದ್ದುನಿಂತಿದೆಯಾದರೂ,ಅದಿನ್ನೂ ಸಂಕಷ್ಟದಿಂದ ಮುಕ್ತವಾಗಿಲ್ಲವೆಂದು ವಿಶ್ವಬ್ಯಾಂಕ್ ‘ ಸೌತ್ ಏಶ್ಯ ಇಕನಾಮಿಕ್ ಫೋಕಸ್’ವರದಿ ಹೇಳಿದೆ.
ಸಾಂಕ್ರಾಮಿಕದ ಹಾವಳಿ ಹಾಗೂ ನೀತಿನಿರೂಪಣೆಗಳೆರಡರಲ್ಲೂ ಅನಿಶ್ಚಿತತೆ ಉಂಟಾಗಿರುವ ಹಿನ್ನೆಲೆಯಲ್ಲಿ 2021-22ನೇ ಸಾಲಿನ ಹಣಕಾಸು ವರ್ಷದಲ್ಲಿ ನೈಜ ಜಿಡಿಪಿ ಬೆಳವಣಿಗೆಯು ಶೇ.7.5ರಿಂದ ಶೇ.12.5ರ ನಡುವೆ ಇರಲಿದೆ. ಆದಾಗ್ಯೂ ಈಗ ನಡೆಯುತ್ತಿರುವ ಲಸಿಕೆ ಅಭಿಯಾನದ ಪ್ರಗತಿ, ಜನರ ಚಲನವಲನಕ್ಕೆ ಹೊಸ ನಿರ್ಬಂಧಗಳ ಅವಶ್ಯಕತೆಯಿದೆಯೇ ಹಾಗೂ ವಿಶ್ವದ ಆರ್ಥಿಕತೆಯು ಎಷ್ಟು ತ್ವರಿತವಾಗಿ ಚೇತರಿಸಿಕೊಳ್ಳಲಿದೆ ಎಂಬುದನ್ನು ಭಾರತದ ಜಿಡಿಪಿ ಬೆಳವಣಿಗೆಯು ಆಧರಿಸಿದೆ ವಿಶ್ವ ಬ್ಯಾಂಕ್ ತನ್ನ ದಕ್ಷಿಣ ಏಶ್ಯ ಆರ್ಥಿಕತೆ ಕುರಿತ ವರದಿಯಲ್ಲಿ ಹೇಳಿದೆ.