ಕೃಷಿ ಕಾಯ್ದೆ ಕುರಿತು ವರದಿ ಸಲ್ಲಿಸಿದ ಸುಪ್ರೀಂ ಕೋರ್ಟ್ ನಿಯೋಜಿತ ಸಮಿತಿ

ಹೊಸದಿಲ್ಲಿ, ಮಾ. 31: ಸುಪ್ರೀಂ ಕೋರ್ಟ್ ನಿಯೋಜಿತ ಸಮಿತಿ ಕೃಷಿ ಕಾಯ್ದೆಗಳ ಕುರಿತ ತನ್ನ ವರದಿಯನ್ನು ಸಲ್ಲಿಸಿದೆ. ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದ್ದ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳ ಕುರಿತ ಬಿಕ್ಕಟ್ಟನ್ನು ಅಂತ್ಯಗೊಳಿಸಲು ನ್ಯಾಯಾಲಯ ಜನವರಿಯಲ್ಲಿ ಮೂವರು ಸದಸ್ಯರ ಸಮಿತಿಯೊಂದನ್ನು ರೂಪಿಸಿತ್ತು.
‘‘ವರದಿಯನ್ನು ಮಾರ್ಚ್ 19ರಂದು ಸಲ್ಲಿಸಲಾಗಿದೆ’’ ಎಂದು ಸಮಿತಿಯ ಸದಸ್ಯ ಅನಿಲ್ ಘಣವತ್ ಅವರು ಹೇಳಿದ್ದಾರೆ. ಆದರೆ, ಯಾವುದೇ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿರುವ ಅವರು, ಇದು ‘‘ಗೌಪ್ಯ ಪಕ್ರಿಯೆ’’. ಈ ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿದೆ ಎಂದಿದ್ದಾರೆ. ‘‘ಈ ಸಮಸ್ಯೆಯನ್ನು ಪರಿಹರಿಸಲು ನಾವು ಬಯಸಿದ್ದೇವೆ. ಅದಕ್ಕಾಗಿಯೇ ನಾವು ಈ ಸಮಿತಿ ರೂಪಿಸಿದ್ದೇವೆ’’ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ಅವರು ಹೇಳಿದ್ದಾರೆ.
‘‘ಇದು ಸಾವು ಹಾಗೂ ಬದುಕಿನ ವಿಷಯ. ನಮಗೆ ಕಾನೂನಿನ ಬಗ್ಗೆ ಕಾಳಜಿ ಇದೆ. ನಮಗೆ ಚಳವಳಿಯಿಂದ ಜನರ ಜೀವನ ಹಾಗೂ ಸೊತ್ತಿನ ಮೇಲೆ ಉಂಟಾದ ಪರಿಣಾಮದ ಬಗ್ಗೆ ಆತಂಕ ಇದೆ. ನಾವು ಈ ಸಮಸ್ಯೆಯನ್ನು ಉತ್ತಮ ರೀತಿಯಲ್ಲಿ ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ. ಕಾನೂನನ್ನು ಅಮಾನತುಗೊಳಿಸುವುದು ನಮ್ಮಲ್ಲಿರುವ ಅಧಿಕಾರಗಳಲ್ಲಿ ಒಂದಾಗಿದೆ’’ ಎಂದು ಬೋಬ್ಡೆ ಹೇಳಿದರು.





