ಇಸ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣ: ಕೊನೆಯ ಮೂವರು ಆರೋಪಿಗಳು ಖುಲಾಸೆ

ಅಹ್ಮದಾಬಾದ್, ಮಾ. 31: 2004 ಜೂನ್‌ನಲ್ಲಿ ನಡೆದ ಇಸ್ರತ್ ಜಹಾನ್, ಜಾವೇದ್ ಶೇಖ್ ಅಲಿಯಾಸ್ ಪ್ರಾಣೇಶ್ ಪಿಳ್ಳೈ ಹಾಗೂ ಇತರ ಇಬ್ಬರ ಕಾನೂನು ಬಾಹಿರ ಹತ್ಯೆ ಪ್ರಕರಣದ ಆರೋಪಿಗಳಾಗಿರುವ ಮೂವರು ಪೊಲೀಸರನ್ನು ಅಹ್ಮದಾಬಾದ್‌ನ ವಿಶೇಷ ಸಿಬಿಐ ನ್ಯಾಯಾಲಯ ಬುಧವಾರ ಖುಲಾಸೆಗೊಳಿಸಿದೆ.
ಮೂವರು ಪೊಲೀಸ್ ಅಧಿಕಾರಿಗಳಾದ ಐಪಿಎಸ್ ಅಧಿಕಾರಿ ಜಿ.ಎಲ್ ಸಿಂಘಾಲ್, ನಿವೃತ್ತ ಪೊಲೀಸ್ ಅಧಿಕಾರಿ ತರುಣ್ ಬರೋಟ್ ಹಾಗೂ ಅನಜು ಚೌಧರಿ ತಮ್ಮನ್ನು ಖುಲಾಸೆಗೊಳಿಸುವಂತೆ ಮಾರ್ಚ್ 20ರಂದು ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಮೂವರ ವಿರುದ್ಧದ ವಿಚಾರಣೆಯನ್ನು ನ್ಯಾಯಾಲಯ ಕೈಬಿಟ್ಟಿದೆ. ಸಿಬಿಐ ಮೇಲ್ಮನವಿ ಸಲ್ಲಿಸದೇ ಇದ್ದಲ್ಲಿ ಈ ಪ್ರಕರಣದ ವಿಚಾರಣೆ ವಸ್ತುಶಃ ಅಂತ್ಯಗೊಳ್ಳಲಿದೆ.
ವಿಶೇಷ ಸಿಬಿಐ ನ್ಯಾಯಾಧೀಶ ವಿ.ಆರ್. ರಾವಲ್, ಹತ್ಯೆಗೀಡಾದ ಇಸ್ರತ್ ಜಹಾನ್ ಹಾಗೂ ಇತರ ನಾಲ್ವರು ಭಯೋತ್ಪಾದಕರು ಅಲ್ಲ ಎಂದು ಹೇಳಲು ಮೇಲ್ನೋಟಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಹೇಳಿದ್ದಾರೆ. ಪಾಕಿಸ್ತಾನದ ಪ್ರಜೆಗಳು ಎಂದು ಹೇಳಲಾದ ಇಸ್ರತ್ ಜಹಾನ್, ಪ್ರಾಣೇಶ್ ಪಿಳ್ಳೈ, ಅಮ್ಜದ್ ಅಲಿ ರಾಣಾ ಹಾಗೂ ಝೀಶನ್ ಜೊಹಾರ್ ಅವರನ್ನು 2004 ಜೂನ್ 15ರಂದು ಅಹ್ಮದಾಬಾದ್‌ನ ಹೊರವಲಯದ ಕೊಟಾರ್‌ಪುರದ ಸಮೀಪ ವಂಝರಾ ನೇತೃತ್ವದ ಅಹ್ಮದಾಬಾದ್ ನಗರ ಕ್ರೈಮ್ ಬ್ರಾಂಚ್ ಹತ್ಯೆಗೈದಿತ್ತು. ಅನಂತರ ಡಿಸಿಬಿ ಹೇಳಿಕೆ ನೀಡಿ, ಗುಜರಾತ್‌ನ ಆಗಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು ಹತ್ಯೆಗೈಯಲು ಲಷ್ಕರೆ ತಯ್ಯಿಬದ ಈ ನಾಲ್ವರು ಕಾರ್ಯಕರ್ತರು ಸಂಚು ರೂಪಿಸಿದ್ದರು ಎಂದು ಹೇಳಿತ್ತು.
2013ರಲ್ಲಿ ಸಲ್ಲಿಸಲಾದ ಆರೋಪ ಪಟ್ಟಿಯಲ್ಲಿ ಸಿಬಿಐ ಪಿ.ಪಿ. ಪಾಂಡೆ, ವಂಝರಾ, ಎನ್.ಕೆ. ಅಮಿನ್, ಜೆ.ಜಿ ಪರ್ಮಾರ್, ಸಿಂಘಾಲ್, ಬರೋಟ್ ಹಾಗೂ ಚೌದರಿ ಅವರು ಆರೋಪಿಗಳು ಎಂದು ಹೆಸರಿಸಿತ್ತು. ಎಲ್ಲಾ ಆರೋಪಿಗಳ ವಿರುದ್ಧ ಹತ್ಯೆ, ಅಪಹರಣ, ಸಾಕ್ಷ್ಯ ನಾಶ ಹಾಗೂ ಇತರ ಆರೋಪಗಳನ್ನು ಹೊರಿಸಲಾಗಿತ್ತು.







