ನಿರೀಕ್ಷಣಾ ಜಾಮೀನು ಕೋರಿ ರಮೇಶ್ ಜಾರಕಿಹೊಳಿ ಅರ್ಜಿ ಸಲ್ಲಿಸುವ ಸಾಧ್ಯತೆ

ಬೆಂಗಳೂರು, ಮಾ.31: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ವೀಡಿಯೊ ಪ್ರಕರಣದಲ್ಲಿ ಸಂತ್ರಸ್ತ ಯುವತಿಯು ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ ಬೆನ್ನಲ್ಲೇ ರಮೇಶ್ ಜಾರಕಿಹೊಳಿ, ಸಂಕಷ್ಟದಿಂದ ಪಾರಾಗಲು ನ್ಯಾಯಾಲಯದ ಮೊರೆ ಹೋಗಲು ಸಿದ್ಧತೆ ನಡೆಸಿದ್ದಾರೆ.
ಪ್ರಕರಣದ ಸಂಬಂಧ ನ್ಯಾಯಾಲಯದ ಮೊರೆ ಹೋಗಲು ರಮೇಶ್ ಜಾರಕಿಹೊಳಿ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದ್ದು, ಇನ್ನೆರಡು ದಿನಗಳಲ್ಲಿ ವಕೀಲರ ಮೂಲಕ ಸಿಆರ್‍ಪಿಸಿ 438 ಅಡಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ.
ನಿರೀಕ್ಷಣಾ ಜಾಮೀನು ತೆಗೆದುಕೊಳ್ಳುವಂತೆ ಸಹೋದರನಿಗೆ ಬಾಲಚಂದ್ರ ಸಲಹೆ ನೀಡಿದ್ದು, ಮುಂದಿನ ನಡೆ ಕುರಿತು ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಸಹೋದರನ ಪರವಾಗಿ ಕಾನೂನು ಹೋರಾಟಕ್ಕೆ ಮುಂದಾಗಿರುವ ಬಾಲಚಂದ್ರ ಜಾರಕಿಹೊಳಿ, ಇನ್ನಷ್ಟು ದಿನ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದರು. ಆದರೆ, ಮಾ.30ರಂದು ಮ್ಯಾಜಿಸ್ಟ್ರೇಟ್ ಮುಂದೆ ಯುವತಿ ಹೇಳಿಕೆ ದಾಖಲಿಸಿದ ಬೆನ್ನಲ್ಲೆ, ಅನಿವಾರ್ಯವಾಗಿ ಕೋರ್ಟ್ ಮೊರೆ ಹೋಗಲು ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.







