ಸಚಿವ ಶ್ರೀರಾಮುಲು ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

ಬೆಂಗಳೂರು, ಮಾ.31: ರಾಜ್ಯದಲ್ಲಿ ಒಂದು ಲೋಕಸಭಾ, ಎರಡು ವಿಧಾನಸಭಾ ಕ್ಷೇತ್ರಗಳಿಗೆ ಎ.17ರಂದು ಉಪ ಚುನಾವಣೆ ನಡೆಯಲಿದ್ದು, ಈ ಕ್ಷೇತ್ರಗಳಲ್ಲಿ ಕೇಂದ್ರ ಚುನಾವಣಾ ಆಯೋಗದ ಆದೇಶದ ಅನ್ವಯ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದೆ. ಆದರೆ, ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವ ವಿಚಾರವನ್ನು ಮುಂದಿಟ್ಟುಕೊಂಡು ಮತದಾರರ ಮೇಲೆ ಪ್ರಭಾವ ಬೀರುವಂತೆ ಪ್ರಚಾರ ಮಾಡುತ್ತಿದ್ದಾರೆ ಕಾಂಗ್ರೆಸ್ ಆರೋಪಿಸಿದೆ.
ಈ ಸಂಬಂಧ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಗೆ ದೂರು ಸಲ್ಲಿಸಿರುವ ಕೆಪಿಸಿಸಿ ವಕ್ತಾರ ರಮೇಶ್ ಬಾಬು, ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿರುವ ಶ್ರೀರಾಮುಲು, ಕ್ಷೇತ್ರದ ಮದಕಿನಾಳ್ ಎಂಬಲ್ಲಿ ರಾಜ್ಯ ಬಿಜೆಪಿ ಸರಕಾರವು ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುತ್ತದೆ ಎಂದು ಆಶ್ವಾಸನೆ ನೀಡುವುದರ ಮೂಲಕ ಮತದಾರರ ಮೇಲೆ ರಾಜಕೀಯ ಪ್ರಭಾವ ಬೀರುವ ಪ್ರಯತ್ನ ಮಾಡಿದ್ದಾರೆ ಎಂದು ದೂರಿದ್ದಾರೆ.
ಪ್ರಚಾರದ ಸಮಯದಲ್ಲಿ ತಾವು ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿದ್ದು, ತಮ್ಮ ಅಧಿಕಾರದ ಮೂಲಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಶೇ.17 ಮತ್ತು ಪರಿಶಿಷ್ಟ ವರ್ಗಕ್ಕೆ ಶೇ.7 ಪ್ರಮಾಣದಲ್ಲಿ ಮೀಸಲಾತಿಯನ್ನು ಹೆಚ್ಚಳ ಮಾಡುವುದಾಗಿ ಮತ್ತು ಇದರಿಂದ ಕೆಲವು ಜಾತಿಗಳಿಗೆ ಅನುಕೂಲ ಆಗುವುದಾಗಿ ಬಹಿರಂಗವಾಗಿ ಹೇಳಿಕೆ ನೀಡುವುದರ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ರಮೇಶ್ ಬಾಬು ಆರೋಪಿಸಿದ್ದಾರೆ.
ರಾಜ್ಯ ಸರಕಾರದ ಒಬ್ಬ ಪ್ರಮುಖ ಸಚಿವರಾಗಿ ಚುನಾವಣಾ ಆಯೋಗದ ನೀತಿ ಸಂಹಿತೆಯ ಮಾಹಿತಿ ಇದ್ದರೂ, ಉದ್ದೇಶಪೂರ್ವಕವಾಗಿ ಮತದಾರರ ಮೇಲೆ ಪ್ರಭಾವ ಬೀರುವ ಕಾರಣಕ್ಕಾಗಿ ಮೀಸಲಾತಿ ಹೆಚ್ಚಳದ ಆಶ್ವಾಸನೆ ನೀಡಿದ್ದಾರೆ. ಚುನಾವಣಾ ಆಯೋಗವು ನೀತಿ ಸಂಹಿತೆ ಉಲ್ಲಂಘನೆ ಕಾರಣದ ಮೇಲೆ ಶ್ರೀರಾಮುಲು ಮೇಲೆ ಕ್ರಮ ಕೈಗೊಳ್ಳದೆ ಹೋದರೆ, ಚುನಾವಣಾ ಆಯೋಗವು ಒಬ್ಬ ಸಚಿವರಿಗೆ ತಲೆಬಾಗಿದಂತೆ ಆಗುತ್ತದೆ ಎಂದು ಅವರು ಹೇಳಿದ್ದಾರೆ.
ಆದುದರಿಂದ, ಚುನಾವಣಾ ಆಯೋಗವು ಕೂಡಲೆ ಸಚಿವರ ಮೇಲೆ ಕ್ರಮ ಕೈಗೊಂಡು, ಇವರನ್ನು ಮೂರು ಕ್ಷೇತ್ರದ ಉಪ ಚುನಾವಣೆ ಪ್ರಚಾರ ಕಾರ್ಯದಿಂದ ಹೊರಗಿಟ್ಟು, ಈ ಮೂರು ಕ್ಷೇತ್ರದಲ್ಲಿ ಪ್ರವಾಸ ಮಾಡದಂತೆ ನಿರ್ಬಂಧ ವಿಧಿಸಬೇಕು. ರಾಜ್ಯದಲ್ಲಿ ಪಾರದರ್ಶಕವಾಗಿ ಉಪ ಚುನಾವಣೆಗಳನ್ನು ನಡೆಸುವ ಕಾರಣಕ್ಕಾಗಿ ಸಚಿವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ರಮೇಶ್ ಬಾಬು ದೂರಿನಲ್ಲಿ ಮನವಿ ಮಾಡಿದ್ದಾರೆ.







