ಅಶ್ಲೀಲ ಸಿಡಿ ಪ್ರಕರಣ: ಸಂತ್ರಸ್ತ ಯುವತಿಯ ವಿಚಾರಣೆ ಮತ್ತಷ್ಟು ಚುರುಕು

ಬೆಂಗಳೂರು, ಮಾ.31: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಸಿಟ್(ವಿಶೇಷ ತನಿಖಾ ತಂಡ) ತನಿಖಾಧಿಕಾರಿಗಳು ಸಂತ್ರಸ್ತ ಯುವತಿಯ ವಿಚಾರಣೆ ಪ್ರಕ್ರಿಯೆಯನ್ನು ಕಳೆದ ಎರಡು ದಿನಗಳಿಂದ ಮತ್ತಷ್ಟು ಚುರುಕುಗೊಳಿಸಿದ್ದಾರೆ.
ಬುಧವಾರ ಬೆಳಗ್ಗೆ ಪೊಲೀಸ್ ಭದ್ರತೆಯೊಂದಿಗೆ ನಗರದ ಬೌರಿಂಗ್ ಹಾಗೂ ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ಯುವತಿಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಯಿತು. ನಂತರ ಅಲ್ಲಿಂದ ಆಡುಗೋಡಿಯ ತಾಂತ್ರಿಕ ಕೇಂದ್ರಕ್ಕೆ ಯುವತಿಯನ್ನು ಕರೆದೊಯ್ದ ಸಿಟ್ ತನಿಖಾಧಿಕಾರಿಗಳು ಸತತ ನಾಲ್ಕು ಗಂಟೆಗಳ ಕಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ, ಹಲವು ಹೇಳಿಕೆಗಳನ್ನು ಸಂಗ್ರಹಿಸಿದರು.
ಪ್ರತಿಯೊಂದು ಉತ್ತರಕ್ಕೂ ದಾಖಲೆ: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರ ಪರಿಚಯ ಸೇರಿದಂತೆ ಇನ್ನಿತರೆ ಮಾಹಿತಿ ಕುರಿತು ಸಿಟ್ ತನಿಖಾಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಲಿಖಿತ ರೂಪದಲ್ಲಿ ಉತ್ತರಿಸಿರುವ ಯುವತಿ, ಅದಕ್ಕೆ ತಕ್ಕಂತೆ ದಾಖಲೆಗಳನ್ನು ಸಹ ಸಲ್ಲಿಕೆ ಮಾಡಿರುವುದಾಗಿ ತಿಳಿದುಬಂದಿದೆ.
300 ಪುಟಗಳ ವಾಟ್ಸ್ ಆ್ಯಪ್ ಸಂದೇಶ: ರಮೇಶ್ ಜಾರಕಿಹೊಳಿ ಹಾಗೂ ಯುವತಿಯ ನಡುವೆ ನಡೆದಿರುವ 300 ಪುಟಗಳ ವಾಟ್ಸ್ ಆ್ಯಪ್ ಸಂದೇಶಗಳ ವಿವರವನ್ನು ತನಿಖಾಧಿಕಾರಿಗಳಿಗೆ ಸಲ್ಲಿಕೆ ಮಾಡಲಾಗಿದೆ. ಯುವತಿ ಪರ ವಕೀಲ ಜಗದೀಶ್ ಕೆ.ಎನ್.ಮಹಾದೇವ ಅವರು ತನಿಖೆ ಸಹಕಾರಿಯಾಗುವ ಹಿನ್ನೆಲೆಯಲ್ಲಿ ವಾಟ್ಸ್ ಆ್ಯಪ್ ದಾಖಲೆಯನ್ನು ತನಿಖಾಧಿಕಾರಿಗಳಿಗೆ ಒದಗಿಸಲಿದ್ದಾರೆ ಎಂದು ತಿಳಿದುಬಂದಿದೆ.
ಇದಲ್ಲದೇ ರಮೇಶ್ ಜಾರಕಿಹೊಳಿ ಅವರು ಯುವತಿಗೆ ನೀಡಿರುವ ಬೆಲೆ ಬಾಳುವ ಉಡುಗೊರೆ, ಮೊಬೈಲ್ ಕರೆಗಳ ಮಾತುಕತೆ ವಿವರಗಳು, ಇಬ್ಬರು ಜೊತೆಯಲ್ಲಿದ್ದ ಫೋಟೋಗಳ ದಾಖಲಾತಿಗಳನ್ನು ಜಗದೀಶ್ ಅವರ ವಕೀಲರ ತಂಡ ಆಡುಗೋಡಿಯಲ್ಲಿರುವ ಪೊಲೀಸ್ ಇಲಾಖೆಯ ತಾಂತ್ರಿಕ ವಿಭಾಗಕ್ಕೆ ಸಲ್ಲಿಸಿದರು ಎಂದು ಮೂಲಗಳು ತಿಳಿಸಿವೆ.
ಪರದಾಟ: ಇಲ್ಲಿನ ಬೌರಿಂಗ್ ಹಾಗೂ ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ಯುವತಿಯ ವೈದ್ಯಕೀಯ ಪರೀಕ್ಷೆ ನಡೆಸಿದ ಕಾರಣದಿಂದಾಗಿ ಹೊರರೋಗಿಗಳು ಕೆಲಕಾಲ ಪರದಾಡಿದ ದೃಶ್ಯ ಕಂಡುಬಂದಿತು. ಏಕಾಏಕಿ ಪೊಲೀಸರ ವಾಹನಗಳು ಆಸ್ಪತ್ರೆ ಆವರಣದೊಳಗೆ ಒಳ ನುಗ್ಗಿದಾಗ, ಮುಖ್ಯ ಪ್ರವೇಶ ದ್ವಾರವನ್ನು ಬಂದ್ ಮಾಡಲಾಗಿತ್ತು. ಇದರ ಪರಿಣಾಮ ಹೊರಗಡೆಯೇ ಕೆಲ ರೋಗಿಗಳು ಬಿಸಿಲಿನಲ್ಲಿ ನಿಂತಿದ್ದ ದೃಶ್ಯ ಕಂಡಿತು.
ಯುವತಿಯ ವೈದ್ಯಕೀಯ ತಪಾಸಣೆ ನಡೆದ ಶಿವಾಜಿನಗರದ ಬೌರಿಂಗ್ ಆಸ್ಪತ್ರೆ, ಆಡುಗೋಡಿ ತಾಂತ್ರಿಕ ವಿಭಾಗದ ವ್ಯಾಪ್ತಿಯಲ್ಲಿ ಬುಧವಾರವೂ ಸಹ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರೆಸಲಾಗಿತ್ತು.
ಇಂದು ಮಹಜರು ?
ಪ್ರಕರಣ ಸಂಬಂಧ ಸಂತ್ರಸ್ತ ಯುವತಿಯನ್ನು ಗುರುವಾರ ಮಹಜರು ಪ್ರಕ್ರಿಯೆ ನಡೆಸಲು ಸಿಟ್ ತನಿಖಾಧಿಕಾರಿಗಳು ತಯಾರಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿಟ್ ವಿರುದ್ಧ ದೂರು
ಉದ್ದೇಶಪೂರ್ವಕವಾಗಿ ಸಿಟ್ ಅಧಿಕಾರಿಗಳು ಹಾಗೂ ಪೊಲೀಸರು ಸಂತ್ರಸ್ತ ಯುವತಿಯ ವಿಡಿಯೊವನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಾರೆ. ಈ ಸಂಬಂಧ ನ್ಯಾಯಾಲಯಕ್ಕೆ ದೂರು ಸಲ್ಲಿಕೆ ಮಾಡಲಾಗುವುದು.
-ಜಗದೀಶ್ ಕೆ.ಎನ್.ಮಹಾದೇವ, ವಕೀಲ







