ಮುಖೇಶ್ ಅಂಬಾನಿ ನಿವಾಸದ ಸಮೀಪ ಕಾರು ನಿಲ್ಲಿಸಿದ್ದು ಸಚಿನ್ ವಝೆ ಚಾಲಕ: ಎನ್‌ಐಎ

ಮುಂಬೈ, ಮಾ. 31: ಬಂಧಿತ ಮುಂಬೈಯ ಪೊಲೀಸ್ ಅಧಿಕಾರಿ ಸಚಿನ್ ವಝೆ ಅವರ ಖಾಸಗಿ ಚಾಲಕ ಸ್ಫೋಟಕ ತುಂಬಿದ ಸ್ಕಾರ್ಪಿಯೊ ಕಾರು ಚಲಾಯಿಸಿದ್ದ ಹಾಗೂ ಅದನ್ನು ‘ಆ್ಯಂಟಿಲಾ’ದ ಹೊರಗೆ ನಿಲ್ಲಿಸಿದ್ದ ಎಂದು ಮುಖೇಶ್ ಅಂಬಾನಿ ಅವರಿಗೆ ಬಾಂಬ್ ಬೆದರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹೇಳಿದೆ.
ಮುಖೇಶ್ ಅಂಬಾನಿ ಅವರ ನಿವಾಸದ ಹೊರಗೆ ಸ್ಕಾರ್ಪಿಯೊ ಕಾರನ್ನು ನಿಲ್ಲಿಸುವ ಮುನ್ನ ಸಚಿನ್ ವಾಝೆ ಅವರ ಚಲಾಯಿಸುತ್ತಿದ್ದ ಬಿಳಿ ಬಣ್ಣದ ಇನ್ನೋವಾ ಕಾರನ್ನು ಸ್ಕಾರ್ಪಿಯೋ ಕಾರು ಹಿಂಬಾಲಿಸಿತ್ತು ಎಂದು ಎನ್‌ಐಎಯ ತನಿಖೆ ಬಹಿರಂಗಗೊಳಿಸಿದೆ. ಫೆಬ್ರವರಿ 17ರಂದು ಮನ್‌ಸುಖ್ ಹಿರೇನ್ ಅವರು ತಾಂತ್ರಿಕ ತೊಂದರೆ ಉಲ್ಲೇಖಿಸಿ ಸ್ಕಾರ್ಪಿಯೊ ಕಾರನ್ನು ಮುಲುಂದ್-ಐರೋಲಿ ರಸ್ತೆಯಲ್ಲಿ ನಿಲ್ಲಿಸಿದ್ದರು. ಮನ್‌ಸುಖ್ ಹಿರೇನ್ ಅದೇ ದಿನ ನಗರ ಪೊಲೀಸ್ ಕೇಂದ್ರ ಕಚೇರಿಗೆ ಆಗಮಿಸಿದ್ದರು ಹಾಗೂ ಕಾರಿನ ಕೀಯನ್ನು ಸಚಿನ್ ವಾಝೆ ಅವರಿಗೆ ಹಸ್ತಾಂತರಿಸಿದ್ದರು ಎಂದು ಎನ್‌ಐಐ ಹೇಳಿದೆ.
ಸಚಿನ್ ವಾಝೆ ಅವರ ಸಲಹೆಯಂತೆ ಚಾಲಕ ಮನ್‌ಸುಖ್ ಹಿರೇನ್ ಸ್ಕಾರ್ಪಿಯೊ ಕಾರು ನಿಲ್ಲಿಸಿದ್ದಲ್ಲಿಗೆ ತೆರಳಿದ್ದಾನೆ. ಅನಂತರ ಅದನ್ನು ಚಲಾಯಿಸಿಕೊಂಡು ಹೋಗಿ ಸಾಕೇತ್ ಹೌಸಿಂಗ್ ಸೊಸೈಟಿಯ ವಾಝೆ ಅವರ ನಿವಾಸದ ಸಮೀಪ ನಿಲ್ಲಿಸಿದ್ದಾನೆ. ಫೆಬ್ರವರಿ 19ರಂದು ಚಾಲಕ ಸ್ಕಾರ್ಪಿಯೊವನ್ನು ಪೊಲೀಸ್ ಕೇಂದ್ರ ಕಚೇರಿಗೆ ಚಲಾಯಿಸಿಕೊಂಡು ಹೋಗಿದ್ದಾನೆ ಹಾಗೂ ಅಲ್ಲಿ ನಿಲ್ಲಿಸಿದ್ದಾನೆ. ಅದೇ ದಿನ ಆತ ಸ್ಕಾರ್ಪಿಯೊವನ್ನು ಮತ್ತೆ ಚಲಾಯಿಸಿಕೊಂಡು ಬಂದು ಸೊಸೈಟಿ ಸಮೀಪ ನಿಲ್ಲಿಸಿದ್ದಾನೆ. ಫೆಬ್ರವರಿ 24ರ ರಾತ್ರಿವರೆಗೆ ಕಾರು ಅಲ್ಲೇ ಇತ್ತು. ಫೆಬ್ರವರಿ 25ರಂದು ಚಾಲಕ ಕಾರನ್ನು ದಕ್ಷಿಣ ಮುಂಬೈಗೆ ಚಲಾಯಿಸಿಕೊಂಡು ಹೋಗಿದ್ದಾನೆ ಹಾಗೂ ಆ್ಯಂಟಿಲಾದ ಹೊರಗೆ ನಿಲ್ಲಿಸಿದ್ದಾನೆ ಎಂದು ಎನ್‌ಐಎ ಹೇಳಿದೆ.







