ರಾಮಚಂದ್ರಾಪುರ ಮಠಕ್ಕೆ ಬ್ಲ್ಯಾಕ್‍ಮೇಲ್ ಪ್ರಕರಣ: ಆರೋಪದಿಂದ ಕೈಬಿಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ
ಬೆಂಗಳೂರು, ಮಾ.31: ರಾಮಚಂದ್ರಾಪುರ ಮಠಕ್ಕೆ 10 ಕೋಟಿ ರೂಪಾಯಿ ಬ್ಲ್ಯಾಕ್‍ಮೇಲ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಪ್ರಕರಣಗಳನ್ನು ಕೈಬಿಡುವಂತೆ ರಾಜು ಅಡಿ ಸೇರಿ ಐವರು ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ನಗರದ ಸಿಟಿ ಸಿವಿಲ್ ಕೋರ್ಟ್ ವಜಾಗೊಳಿಸಿದೆ.
ಮಠದ ಧರ್ಮಚಕ್ರ ಟ್ರಸ್ಟ್ ನಲ್ಲಿ ಅವ್ಯವಹಾರ ಆಗಿದೆ ಎಂದು ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಿದ್ದೇವೆ. ಅದು ಸದ್ಯದಲ್ಲಿಯೇ ವಿಚಾರಣೆಗೆ ಬರಲಿದ್ದು, ಮಠದ ಮರ್ಯಾದೆ ಹರಾಜು ಹಾಕುತ್ತೇವೆ. ಈ ಅರ್ಜಿಯನ್ನು ವಾಪಸ್ ಪಡೆಯಬೇಕಿದ್ದರೆ 10 ಕೋಟಿ ರೂಪಾಯಿ ನೀಡುವಂತೆ ಆರೋಪಿಗಳು ಮಠದ ಸಿಬ್ಬಂದಿಗೆ ದೂರವಾಣಿ ಕರೆ ಮಾಡಿ ಒತ್ತಾಯಿಸಿದ್ದರು.
ಈ ಸಂಬಂಧ ಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿ ಬಂಧಿಸಿ, ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿದ್ದರು.
ಪೊಲೀಸರು ಪ್ರಕರಣ ಸಂಬಂಧ ತನಿಖೆ ನಡೆಸಿ ನಗರದ ಎಸಿಎಂಎಂ ಕೋರ್ಟ್ ನಲ್ಲಿ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿದ್ದರು. ಈ ಮಧ್ಯೆ ಆರೋಪಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ತಮ್ಮ ಹೆಸರನ್ನು ಪ್ರಕರಣದಿಂದ ಕೈಬಿಡುವಂತೆ ಕೋರಿದ್ದರು.
ನ್ಯಾಯಾಲಯ ಈ ಅರ್ಜಿಯನ್ನು ತಿರಸ್ಕರಿಸಿತ್ತು. ಈ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಮತ್ತು ಚಾರ್ಜ್ ಫ್ರೇಮಿಂಗ್‍ಗೆ ತಡೆ ನೀಡುವಂತೆ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಪರಾಮರ್ಶನಾ ಅರ್ಜಿ ಸಲ್ಲಿಸಲಾಗಿತ್ತು. ಈ ಬಗ್ಗೆ ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಲಯ ಆರೋಪಿಗಳ ಅರ್ಜಿಯನ್ನು ವಜಾ ಮಾಡಿದೆ.
ಐಪಿಸಿ ಸೆಕ್ಷನ್ 239ರ ಅನ್ವಯ ಆರೋಪಿಗಳ ವಿರುದ್ಧ ಮಾಡಿರುವ ಆರೋಪ ಆಧಾರರಹಿತ ಎಂದು ಮ್ಯಾಜಿಸ್ಟ್ರೇಟ್‍ಗೆ ಮನವರಿಕೆಯಾದಲ್ಲಿ ಮಾತ್ರ ಪ್ರಕರಣದಿಂದ ಕೈಬಿಡಬಹುದಾಗಿದೆ. ಆರೋಪಿಗಳ ವಿರುದ್ಧ ಚಾರ್ಜ್ ಫ್ರೇಮ್ ಮಾಡಲು ಅಗತ್ಯವಾದ ಸಾಕಷ್ಟು ಪುರಾವೆಗಳು ಇರುವುದನ್ನು ವಿಚಾರಣಾ ನ್ಯಾಯಾಲಯ ದೃಢಪಡಿಸಿದೆ ಎಂದು ನಗರದ ಸಿಟಿ ಸಿವಿಲ್ ಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದೆ.







