ಕಾರ್ಡ್ ಪಾವತಿಯ ಹೆಚ್ಚುವರಿ ದೃಢೀಕರಣದ ಅವಧಿ ಸೆ. 30ರವರೆಗೆ ವಿಸ್ತರಣೆ: ಆರ್‌ಬಿಐ

ಹೊಸದಿಲ್ಲಿ, ಮಾ.31: ಕಾರ್ಡ್‌ಗಳ ಮೂಲಕ ನಿರಂತರ ವ್ಯವಹಾರ ನಡೆಸಲು ಹೆಚ್ಚುವರಿ ದೃಢೀಕರಣ ನಿಯಮ ಜಾರಿಯ ಅಂತಿಮ ದಿನಾಂಕವನ್ನು ರಿಸರ್ವ್ ಬ್ಯಾಂಕ್ ಸೆಪ್ಟಂಬರ್ 30ರವರೆಗೆ ವಿಸ್ತರಿಸಿದೆ.
ಸ್ವಯಂಚಾಲಿತ ಮರುಕಳಿಸುವ ಪಾವತಿ ವ್ಯವಸ್ಥೆ ಕುರಿತು ಆರ್‌ಬಿಐ ಸೂಚಿಸಿದ ನಿರ್ದೇಶನಗಳ ಪಾಲನೆಗೆ ಹೆಚ್ಚುವರಿ ಸಮಯಾವಕಾಶ ಒದಗಿಸುವಂತೆ ಬ್ಯಾಂಕ್‌ಗಳು ಹಾಗೂ ಪಾವತಿ ಸಂಸ್ಥೆಗಳು ಕೋರಿದ್ದವು. ಕಾರ್ಡ್, ಪ್ರಿಪೇಡ್ ಪೇಮೆಂಟ್ ಸಿಸ್ಟಮ್ಸ್(ಪೂರ್ವಸಂದಾಯಿತ ಪಾವತಿ ವ್ಯವಸ್ಥೆ) ಅಥವಾ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ ವ್ಯವಸ್ಥೆಯಡಿ ವ್ಯವಹಾರ ನಡೆಸುವ (ದೇಶೀಯ ಅಥವಾ ಗಡಿಯಾಚೆಗಿನ ವ್ಯವಹಾರ) ಬ್ಯಾಂಕ್‌ಗಳು(ಆರ್‌ಬಿಐ ಸಹಿತ), ಎನ್‌ಬಿಎಫ್‌ಸಿ(ಬ್ಯಾಂಕಿಂಗೇತರ ವಿತ್ತ ಸಂಸ್ಥೆ)ಗಳು ಹೆಚ್ಚುವರಿ ದೃಢೀಕರಣ ಪ್ರಕ್ರಿಯೆ ನಡೆಸುವುದನ್ನು ಕಡ್ಡಾಯಗೊಳಿಸಿ ಆರ್‌ಬಿಐ ಸೂಚನೆ ಹೊರಡಿಸಿತ್ತು ಮತ್ತು ಇದಕ್ಕೆ ಮಾರ್ಚ್ 31 ಅಂತಿಮ ದಿನ ಎಂದು ತಿಳಿಸಿತ್ತು.
ಹೊಸ ನಿಯಮದಡಿ, ಆವರ್ತನ (ಮರುಕಳಿಸುವ) ಬಾಕಿ ಪಾವತಿಯ ಬಗ್ಗೆ ಬ್ಯಾಂಕ್‌ಗಳು ಮುಂಚಿತವಾಗಿ ಗ್ರಾಹಕರಿಗೆ ಮಾಹಿತಿ ನೀಡಿ ಅವರ ಒಪ್ಪಿಗೆ ಪಡೆದ ಬಳಿಕ ವ್ಯವಹಾರ ಮುಂದುವರಿಸಬೇಕು. ಇಲ್ಲಿ ವ್ಯವಹಾರ ಸ್ವಯಂಚಾಲಿತ ಆಗಿರುವುದಿಲ್ಲ ಮತ್ತು ಗ್ರಾಹಕರ ದೃಢೀಕರಣ ಪಡೆದ ಬಳಿಕ ಮುಂದುವರಿಯುತ್ತದೆ. 5,000 ರೂ.ಗಿಂತಲೂ ಹೆಚ್ಚಿನ ಆವರ್ತನ ಪಾವತಿಗೆ ಬ್ಯಾಂಕ್‌ಗಳು ಗ್ರಾಹಕರಿಗೆ ಒಟಿಪಿ(ಒನ್ ಟೈಮ್ ಪಾಸ್‌ವರ್ಡ್) ಕಳಿಸಬೇಕು.
ಇದೀಗ ಈ ನಿಯಮ ಅಳವಡಿಕೆಗೆ ಸೆಪ್ಟಂಬರ್ 30ರವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.







