ಫ್ಲಾಯ್ಡ್ ರ ಕ್ಷಮೆ ಕೋರುತ್ತಾ ಹಲವು ರಾತ್ರಿಗಳನ್ನು ಕಳೆದೆ
ವೀಡಿಯೊ ಚಿತ್ರೀಕರಣ ಮಾಡಿದ ತರುಣಿಯಿಂದ ನ್ಯಾಯಾಲಯದಲ್ಲಿ ಸಾಕ್ಷ್ಯ

ಫೈಲ್ ಚಿತ್ರ
ಮಿನಿಯಪೊಲಿಸ್ (ಅವೆುರಿಕ), ಮಾ. 31: ಬಂಧನದ ವೇಳೆ ಪೊಲಿಸರ ಕೈಯಿಂದ ಮೃತಪಟ್ಟಿರುವ ಕರಿಯ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ರ ಪ್ರಾಣವನ್ನು ಉಳಿಸಲು ಸಾಧ್ಯವಾಗದಿರುವುದಕ್ಕೆ ನನಗೆ ವಿಷಾದವಿದೆ ಎಂದು ಘಟನೆಯ ಪ್ರತ್ಯಕ್ಷದರ್ಶಿ ಹಾಗೂ ಅದರ ವೀಡಿಯೊ ಚಿತ್ರೀಕರಣ ಮಾಡಿರುವ ಹದಿಹರಯದ ತರುಣಿ ಮಂಗಳವಾರ ಹೇಳಿದ್ದಾರೆ.
ಕಳೆದ ವರ್ಷದ ಮೇ 25ರಂದು 20 ಡಾಲರ್ ನಕಲಿ ನೋಟೊಂದನ್ನು ಚಲಾಯಿಸಿದ ಆರೋಪದಲ್ಲಿ 46 ವರ್ಷದ ಫ್ಲಾಯ್ಡ್ರನ್ನು ಬಂಧಿಸಲು ಮಿನಸೋಟ ರಾಜ್ಯದ ಮಿನಿಯಪೊಲಿಸ್ ಪೊಲೀಸರು ಮುಂದಾಗಿದ್ದರು. ಫ್ಲಾಯ್ಡ್ ರನ್ನು ನೆಲಕ್ಕೆ ಕೆಡವಿದ 44 ವರ್ಷದ ಬಿಳಿಯ ಪೊಲೀಸ್ ಅಧಿಕಾರಿ ಡೆರೆಕ್ ಶಾವಿನ್, ಬಳಿಕ ಅವರ ಕುತ್ತಿಗೆಯ ಮೇಲೆ ಮೊಣಕಾಲೂರಿ ಕುಳಿತಿದ್ದರು. ‘‘ನನಗೆ ಉಸಿರಾಡಲು ಕಷ್ಟವಾಗುತ್ತಿದೆ; ನನ್ನನ್ನು ಬಿಟ್ಟುಬಿಡಿ’’ ಎಂಬುದಾಗಿ ಹಿಂದಿನಿಂದ ಕೈಕೋಳ ಹಾಕಲ್ಪಟ್ಟಿದ್ದ ಫ್ಲಾಯ್ಡ್ ಗೋಗರೆದರೂ ಪೊಲೀಸ್ ಅಧಿಕಾರಿ ತನ್ನ ಮೊಣಕಾಲನ್ನು ಕುತ್ತಿಗೆಯಿಂದ ತೆಗೆದಿರಲಿಲ್ಲ. 9 ನಿಮಿಷಗಳಿಗೂ ಅಧಿಕ ಸಮಯದ ಬಳಿಕ ಪೊಲೀಸ್ ಅಧಿಕಾರಿ ಕಾಲು ತೆಗೆದಾಗ ಫ್ಲಾಯ್ಡಾ ಶವವಾಗಿದ್ದರು.
18 ವರ್ಷದ ಡಾರ್ನೆಲಾ ಫ್ರೇಝಿಯರ್ ಈ ಘಟನೆಯನ್ನು ಚಿತ್ರೀಕರಿಸಿದ್ದರು. ಬಳಿಕ ಆ ವೀಡಿಯೊ ವೈರಲ್ ಆಗಿತ್ತು. ಅದರ ಬೆನ್ನಿಗೇ ಜಗತ್ತಿನಾದ್ಯಂತ ಜನಾಂಗೀಯ ತಾರತಮ್ಯದ ವಿರುದ್ಧ ಬೃಹತ್ ಪ್ರತಿಭಟನೆಗಳು ನಡೆದವು.
ಪ್ರಕರಣದ ಪ್ರಮುಖ ಆರೋಪಿ ಶಾವಿನ್ರ ವಿಚಾರಣೆ ಮಂಗಳವಾರ ನಡೆದಾಗ, ಫ್ರೇಝಿಯರ್ ಭಾವನಾತ್ಮಕ ಸಾಕ್ಷ ನುಡಿದರು.
‘‘ನನಗೆ ಕರಿಯ ತಂದೆ ಇದ್ದಾರೆ. ನನಗೆ ಕರಿಯ ಸಹೋದರ ಇದ್ದಾರೆ’’ ಎಂದು ನ್ಯಾಯಾಲಯದಲ್ಲಿ ಕಣ್ಣೀರು ಸುರಿಸುತ್ತಾ ಫ್ರೇಝಿಯರ್ ಹೇಳಿದರು.
‘‘ವೀಡಿಯೊ ಮಾಡುವುದರ ಹೊರತಾಗಿ ಬೇರೇನೂ ಮಾಡಲು ಸಾಧ್ಯವಾಗದಿರುವುದಕ್ಕೆ, ದೈಹಿಕವಾಗಿ ಮಧ್ಯಪ್ರವೇಶಿಸಿ ಜೀವವನ್ನು ಉಳಿಸಲು ಸಾಧ್ಯವಾಗದಿರುವುದಕ್ಕೆ ನಾನು ಹಲವು ರಾತ್ರಿಗಳಲ್ಲಿ ಎಚ್ಚರವಾಗಿದ್ದು ಫ್ಲಾಯ್ಡ್ ರ ಕ್ಷಮೆ ಕೋರಿದ್ದೇನೆ’’ ಎಂದು ಅವರು ಹೇಳಿದರು.
‘‘ಆದರೆ, ಅದು ನಾನು ಮಾಡಬೇಕಾದ ಕೆಲಸವಾಗಿರಲಿಲ್ಲ. ಅದು ಅವರು ಮಾಡಬೇಕಾದ ಕೆಲಸವಾಗಿತ್ತು’’ ಎಂದು ಆರೋಪಿ ಕಟಕಟೆಯಲ್ಲಿ ನಿಂತಿದ್ದ ಪೊಲೀಸ್ ಅಧಿಕಾರಿಯತ್ತ ಬೆರಳು ತೋರಿಸುತ್ತಾ ಅವರು ಹೇಳಿದರು.







