ಸಣ್ಣ ಉಳಿತಾಯದ ಬಡ್ಡಿದರದಲ್ಲಿ ಭಾರೀ ಕಡಿತ: ಪಿಪಿಎಫ್ ಬಡ್ಡಿದರ ಶೇ.7.1ರಿಂದ ಶೇ.6.4ಕ್ಕೆ ಇಳಿಕೆ
ಜನಸಾಮಾನ್ಯರ ಗಾಯದ ಮೇಲೆ ಬರೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಮಾ.31: ಸಣ್ಣ ಉಳಿತಾಯಗಳ ಮೇಲಿನ ಬಡ್ಡಿದರದಲ್ಲಿ ಬುಧವಾರ ಭಾರೀ ಕಡಿತವನ್ನು ಕೇಂದ್ರ ಸರಕಾರ ಪ್ರಕಟಿಸಿದ್ದು, ಬೆಲೆಯೇರಿಕೆಯಿಂದ ತತ್ತರಿಸುತ್ತಿರುವ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಉಳಿತಾಯ ಖಾತೆಯ ಮೇಲಿನ ವಾರ್ಷಿಕ ಬಡ್ಡಿದರವನ್ನು ಶೇ.4ರಿಂದ ಶೇ.3.5ಕ್ಕೆ ಇಳಿಸಲಾಗಿದೆ. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಬಡ್ಡಿದರವನ್ನು ಶೇ.7.1ರಿಂದ ಶೇ.6.4ಕ್ಕೆ ಇಳಿಸಲಾಗಿದೆ. ಎಪ್ರಿಲ್ 1ರಿಂದ ಪರಿಷ್ಕೃತ ಬಡ್ಡಿದರಗಳು ಜಾರಿಗೆ ಬರಲಿವೆ.
ರಾಷ್ಟ್ರೀಯ ಉಳಿತಾಯ ಸರ್ಟಿಫಿಕೇಟ್ (ಎನ್ಎಸ್ಸಿ)ನ ಬಡ್ಡಿದರ ಶೇ.5.9 ಹಾಗೂ ಶೇ.7.6ರಷ್ಟಿದ್ದ ಸುಕನ್ಯಾ ಸಮೃದ್ಧಿ ಯೋಜನಯ ಬಡ್ಡಿದರವನ್ನು ಶೇ.6.9ಕ್ಕೆ ನಿಗದಿಪಡಿಸಲಾಗಿದೆ.
ಐದು ವರ್ಷಗಳ ಅವಧಿಯ ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಬಡ್ಡಿದರವನ್ನು ಶೇ.7.4ರಿಂದ ಶೇ.6.5ಕ್ಕೆ ಇಳಿಸಲಾಗಿದೆ. ಕಿಸಾನ್ ವಿಕಾಸ್ ಪತ್ರದ (ಕೆವಿಪಿ) ಬಡ್ಡಿದರವನ್ನು ಶೇ.6.2ಕ್ಕೆ ಕಡಿತಗೊಳಿಸಲಾಗಿದೆ. 2020-21ರ ಸಾಲಿನಲ್ಲಿ ಕೆವಿಪಿ ಬಡ್ಡಿದರ ಶೇ.6.9ರಷ್ಟಿತ್ತು.
ಅಂಚೆ ಕಚೇರಿ ಉಳಿತಾಯ ಠೇವಣಿ ಮೇಲಿನ ಬಡ್ಡಿದರವನ್ನು ಶೇ.3.5 ಶೇಕಡಕ್ಕೆ ಇಳಿಸಲಾಗಿದ್ದರೆ, ಒಂದರಿಂದ ಐದು ವರ್ಷಗಳ ಅವಧಿಯ ಠೇವಣಿಗೆ (ಟರ್ಮ್ ಡೆಪಾಸಿಟ್) ಶೇ.4.4ರಿಂದ 4.1ರರೆಗೆ ಬಡ್ಡಿದರ ದೊರೆಯಲಿದೆ. ಐದು ವರ್ಷಗಳ ಅವಧಿಯ ರಿಕರಿಂಗ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಶೇ.5.8ಕ್ಕೆ ಇಳಿಸಲಾಗಿದೆ.
ಕಳೆದ ಒಂದು ವರ್ಷದಲ್ಲಿ ಕೇಂದ್ರ ಸರಕಾರವು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿರುವುದು ಇದು ಎರಡನೇ ಸಲವಾಗಿದೆ. 2020-21ರ ಸಾಲಿನ ಹಣಕಾಸು ವರ್ಷದಲ್ಲಿ ಕೇಂದ್ರ ಸರಕಾವು ಸಣ್ಣ ಉಳಿತಾಯಗಳ ಮೇಲಿನ ಬಡ್ಡಿದರವನ್ನು ಶೇ.1ರಷ್ಟು ಕಡಿತಗೊಳಿಸಿತ್ತು.







