ಉಡುಪಿ: ಕಾರ್ಗೋ ಕಂಪೆನಿಯ ಉದ್ಯೋಗಿ ಮೃತ್ಯು
ಉಡುಪಿ, ಮಾ.31: ಬೆಂಗಳೂರಿನ ಐಡಿಯಲ್ ಎಕ್ಸ್‌ಪ್ರೆಸ್ ಕಾರ್ಗೋ ಕಂಪೆನಿಯ ಲಾರಿಯಲ್ಲಿ ಉಡುಪಿಗೆ ಬರುತ್ತಿದ್ದ ಕಂಪೆನಿಯ ಉದ್ಯೋಗಿಯೊಬ್ಬರು ತೀವ್ರ ಅಸ್ವಸ್ಥಗೊಂಡು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ರಮೇಶ್ ಪೂಜಾರಿ(44) ಎಂದು ಗುರುತಿಸಲಾಗಿದೆ. ಇವರು ಕಂಪೆನಿಯ ಬುಕ್ಕಿಂಗ್ ವಿಭಾಗದಲ್ಲಿ ಕೆಲಸ ಮಾಡಿಕೊಂಡಿದ್ದು, ಮಾ.30ರಂದು ರಾತ್ರಿ ರಕ್ತ ವಾಂತಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಕಂಪೆನಿಯ ಕಾರ್ಗೋ ಲಾರಿಯಲ್ಲಿ ಉಡುಪಿಗೆ ಹೊರಟಿದ್ದರು.
ಮಾ.31ರಂದು ಬೆಳಗ್ಗೆ ಉಡುಪಿ ಗುಂಡಿಬೈಲಿನಲ್ಲಿರುವ ಗೋಡೌನ್ ತಲುಪುವಾಗ ತೀವ್ರ ಅಸ್ವಸ್ಥಗೊಂಡ ಇವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಪರೀಕ್ಷಿಸಿದ ವೈದ್ಯರು ರಮೇಶ ಪೂಜಾರಿ ಮೃತಪಟ್ಟಿರುವುದಾಗಿ ತಿಳಿಸಿದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





