ಸಂತ್ರಸ್ತ ಯುವತಿಗೆ ಕಿರುಕುಳ ನೀಡಿದರೆ ಪ್ರತಿಭಟನೆ: ಜಿಲ್ಲಾ ಕಾಂಗ್ರೆಸ್
ಉಡುಪಿ, ಮಾ.31: ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಪ್ರಕರಣದಲ್ಲಿ ರಾಜ್ಯ ಸರಕಾರ ಸಂತ್ರಸ್ತ ಯುವತಿಗೆ ರಕ್ಷಣೆ ನೀಡದೇ, ಮನೆಯವರನ್ನು ಆಕೆ ವಿರುದ್ಧ ಎತ್ತಿಕಟ್ಟುತ್ತಿದೆ. ಸಂತ್ರಸ್ತೆಗೆ ಇದೇ ರೀತಿ ಕಿರುಕುಳ ಮುಂದುವರಿಸಿದರೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಎಚ್ಚರಿಸಿದ್ದಾರೆ.
ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ತಳಕು ಹಾಕುವ ಹುನ್ನಾರ ನಡೆಯುತ್ತಿದೆ. ಇಡೀ ಪ್ರಕರಣದಲ್ಲಿ ಅವರ ಪಾತ್ರವೇನಿಲ್ಲ. ಸರಕಾರ ಹಾಗೂ ಪೊಲೀಸರ ಈ ಕೃತ್ಯವನ್ನು ಖಂಡಿಸುವುದಾಗಿ ಹೇಳಿದ ಕೊಡವೂರು, ಸಂತ್ರಸ್ತ ಯುವತಿಯ ಮನವಿ ಮೇರೆಗೆ ರಾಜಕಾರಣಿಯಾಗಿ ಸಹಾಯ ಮಾಡಿದ್ದಾರೆ ಎಂದರು.
ಸಿಡಿ ಪ್ರಕರಣದ ಆರೋಪಿಯಾಗಿರುವ ರಮೇಶ್ ಜಾರಕಿಹೊಳಿ, ನಮ್ಮ ರಾಜ್ಯಾಧ್ಯಕ್ಷರ ವಿರುದ್ಧ ಅಸಾಂವಿಧಾನಿಕ ಭಾಷೆ ಬಳಸಿರುವುದು ಖಂಡನೀಯ. ಯಾರಿಗೆ ನ್ಯಾಯ ಸಿಗಬೇಕಿತ್ತೋ ಅವರಿಗೆ ಸಿಕ್ಕಿಲ್ಲ. ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಂಡು ದಿಕ್ಕು ತಪ್ಪಿಸುವ ಪ್ರಯತ್ನ ಸರಕಾರದಿಂದ ನಡೆಯುತ್ತಿದೆ. ರಾಜ್ಯದಲ್ಲಿರುವುದು ಅನೈತಿಕ ಸರ್ಕಾರ ಎಂದರು.
ಹೊಸದಾಗಿ ಜಿಲ್ಲಾ ವಕ್ತಾರರಾಗಿ ನೇಮಕಗೊಂಡಿರುವ ಬಿಪಿನ್ ಚಂದ್ರಪಾಲ್ ನಕ್ರೆ, ಭಾಸ್ಕರರಾವ್ ಕಿದಿಯೂರು, ಪ್ರಧಾನ ಕಾರ್ಯದರ್ಶಿ ಕುಶಲ ಶೆಟ್ಟಿ, ಮುಖಂಡರಾದ ಹಬೀಬ್ ಅಲಿ, ಸತೀಶ್ ದೇವಾಡಿಗ, ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ ಮೊದಲಾದವರು ಉಪಸ್ಥಿತರಿದ್ದರು.







