ಸ್ಪರ್ಧಾತ್ಮಕ ಪರೀಕ್ಷೆಯ ನೆರವಿಗೆ ‘ಗೆಟ್ ಮೈ ಕ್ಲಾಸ್’
ಉಡುಪಿ, ಮಾ.31: ವೃತ್ತಿಪರ ಕೋರ್ಸ್‌ಗಳಾದ ಸಿಇಟಿ, ಜೆಇಇ ಹಾಗೂ ನೀಟ್‌ನಂಥ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳನ್ನು ಎದುರಿಸುವ ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳ ನೆರವಿಗೆ ಆನ್‌ಲೈನ್ ಪರೀಕ್ಷೆಯ ಸಿದ್ಧತೆಗಾಗಿ ‘ಗೆಟ್ ಮೈ ಕ್ಲಾಸ್’ ಎಂಬ ಆನ್‌ಲೈನ್ ವೇದಿಕೆ ಯೊಂದನ್ನು ಮಣಿಪಾಲ ಟೆಕ್ನಾಲಜಿ ಲಿಮೆಟೆಡ್ (ಎಂಟಿಎಲ್) ಸಜ್ಜುಗೊಳಿಸಿದೆ ಎಂದು ಎಂಟಿಎಲ್‌ನ ಡಿಜಿಟಲ್ ಸೊಲ್ಯೂಷನ್ ವಿಭಾಗದ ಉಪಾಧ್ಯಕ್ಷ ಗುರುಪ್ರಸಾದ್ ಕಾಮತ್ ತಿಳಿಸಿದ್ದಾರೆ.
ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿಈ ಬಗ್ಗೆ ವಿವರಗಳನ್ನು ನೀಡಿದ ಕಾಮತ್, ಗೆಟ್ ಮೈ ಕ್ಲಾಸ್ ಪ್ಲಾಟ್‌ಫಾರಂನಲ್ಲಿ ಪ್ರಸಕ್ತ ವರ್ಷದ ಪಠ್ಯದ ಪ್ರಶ್ನೆಗಳಲ್ಲದೇ ಈ ಹಿಂದಿನ ವರ್ಷಗಳ ಸಿಇಟಿ, ಜೆಇಇ ಹಾಗೂ ನೀಟ್ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳ ಆಯ್ದ 2,000ಕ್ಕೂ ಅಧಿಕ ಪ್ರಶ್ನೆಗಳಿಗೆ ತಜ್ಞರು ನೀಡಿದ ಉತ್ತರಗಳನ್ನು ಒಳಗೊಂಡ ವೀಡಿಯೋಗಳನ್ನು ಅಳವಡಿಸಲಾಗಿದೆ ಎಂದು ವಿವರಿಸಿದರು.
ಅಲ್ಲದೇ ತಜ್ಞ ಪ್ರಾಧ್ಯಾಪಕರ ಸಲಹೆ-ಸೂಚನೆಗಳೂ ಇದರಲ್ಲಿವೆ. ಪ್ರಶ್ನೆಗಳಿಗೆ ಹೇಗೆ ವೇಗವಾಗಿ ಉತ್ತರಿಸಬಹುದು ಎಂಬ ಬಗ್ಗೆ ತಜ್ಞರ ಮಾಹಿತಿಗಳಿವೆ. ಗೆಟ್ ಮೈ ಕ್ಲಾಸ್ ಫ್ಲಾಟ್‌ಫಾರ್ಮ್‌ಗೆ ವಿದ್ಯಾರ್ಥಿಗಳು ಉಚಿತವಾಗಿ ನೊಂದಾಯಿಸಿಕೊಳ್ಳಬಹುದು ಎಂದು ಗುರುಪ್ರಸಾದ್ ಕಾಮತ್ ತಿಳಿಸಿದರು.
ಸದ್ಯ ಗೆಟ್ ಮೈ ಕ್ಲಾಸ್‌ನಲ್ಲಿ 200 ಗಂಟೆಗಳಿಗೂ ಅಧಿಕ ಸಮಯದ ಕಲಿಕಾ ವಿಷಯಗಳನ್ನು ಅಳವಡಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳನ್ನು ಎದುರಿಸಲು ಬೇಕಾದ ಎಲ್ಲಾ ಮಾಹಿತಿಗಳು ದೊರೆಯಲಿವೆ. ಸಿಇಟಿ ಕೋಚಿಂಗ್‌ಗೆ ಮೂರು ತಿಂಗಳಿಗೆ ರೂ.399 ಹಾಗೂ ಜೆಇಇ ಮತ್ತು ನೀಟ್‌ಗೆ ಮೂರು ತಿಂಗಳಿಗೆ 799 ರೂ. ಚಂದಾ ಆಗಿದೆ. ಎ.4ರೊಳಗೆ ಸಿಇಟಿಗೆ ಉಚಿತ ಕೋಚಿಂಗ್‌ಗೆ ಅವಕಾಶವಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ವಾಣಿಜ್ಯ ವ್ಯವಸ್ಥಾಪಕ ಅಭಿಜಿತ್ ಸ್ವರ್ ಉಪಸ್ಥಿತರಿದ್ದರು.







