ಕೋವಿಡ್ ಹೆಚ್ಚಳ ಹಿನ್ನಲೆ: ಜಾತ್ರೆ, ಮೇಳ, ಸಭೆ, ಸಮಾರಂಭಗಳಿಗೆ ನಿಷೇಧ; ಚಿಕ್ಕಮಗಳೂರು ಜಿಲ್ಲಾಧಿಕಾರಿ
''ಸುರಕ್ಷಿತ ಅಂತರ, ಮಾಸ್ಕ್ ಬಳಕೆ ಕಡ್ಡಾಯ''

ಚಿಕ್ಕಮಗಳೂರು, ಮಾ.31; ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಸತತವಾಗಿ ಹೆಚ್ಚಾಗುತ್ತಿರುವುದರಿಂದ ಹಬ್ಬಗಳ ಸಂದರ್ಭದಲ್ಲಿ ನಡೆಯಬಹುದಾದ ಸಮಾರಂಭಗಳು, ಆಚರಣೆಗಳು ಹಾಗೂ ಸಾರ್ವಜನಿಕರು ಗುಂಪು ಸೇರಬಹುದಾದ ಇತರ ಚಟುವಟಿಕೆಗಳು ಸೋಂಕು ಹರಡುವಿಕೆಯನ್ನು ಗಣನೀಯವಾಗಿ ಹೆಚ್ಚಿಸಬಹುದಾದ ಆತಂಕವಿರುತ್ತದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ಗುಂಪು ಗುಂಪಾಗಿ ಸೇರುವುದರಿಂದ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಸಾಧ್ಯವಾಗದೇ ಕೋವಿಡ್-19 ಸೋಂಕು ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುವ ಸಾಧ್ಯತೆಗಳು ಹೆಚ್ಚಿರುವುದರಿಂದ ಸರಕಾರದ ಆದೇಶದನ್ವಯ ಜಿಲ್ಲೆಯಾದ್ಯಂತ ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಜಾತ್ರೆ, ಮೇಳಗಳು, ಸಭೆ, ಸಮಾರಂಭ ಹಾಗೂ ಆಚರಣೆಗಳನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಮುಖಗವಸನ್ನು ಧರಿಸುವುದು, ಸುರಕ್ಷಿತ ಅಂತರವನ್ನು ಕಾಪಾಡುವುದು, ಸಾರ್ವಜನಿಕವಾಗಿ ಗುಂಪು ಸೇರುವುದನ್ನು ಹಾಗೂ ಮದುವೆ, ಜನ್ಮ ದಿನ ಆಚರಣೆ, ಅಂತ್ಯಕ್ರಿಯೆ, ಧಾರ್ಮಿಕ ಮತ್ತು ರಾಜಕೀಯ ಸಮಾರಂಭಗಳ ಆಚರಣೆಗಳಲ್ಲಿ ಗುಂಪು ಸೇರುವುದನ್ನು ಸೀಮಿತಗೊಳಿಸಿ ಸರಕಾರದ ನಿರ್ದೇಶನದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯವಶ್ಯಕವಾಗಿದ್ದು, ದಂಡ ಪ್ರಕ್ರಿಯೆ ಸಂಹಿತೆ 1973ರ ಕಲಂ 144 (3) ಮತ್ತು ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ 26, 33 ಮತ್ತು 34 ರಡಿಯಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಈ ಆದೇಶ ಹೊರಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಎಲ್ಲಾ ಧಾರ್ಮಿಕ ಆಚರಣೆ, ಕಾರ್ಯಕ್ರಮಗಳನ್ನು ಸಾಂಕೇತಿಕವಾಗಿ ಆಚರಿಸಲು ಸೂಚಿಸಿರುವ ಅವರು, ಮುಂಬರುವ ಧಾರ್ಮಿಕ ಹಬ್ಬಗಳಾದ ಯುಗಾದಿ ಹಾಗೂ ಗುಡ್‍ಫ್ರೈಡೇ ಇತ್ಯಾದಿ ಹಬ್ಬಗಳ ಆಚರಣೆಯ ಸಂದರ್ಭಗಳಲ್ಲಿ ಜಿಲ್ಲೆಯ ಯಾವುದೇ ಸಾರ್ವಜನಿಕ ಸ್ಥಳಗಳು, ಸಾರ್ವಜನಿಕ ಮೈದಾನ, ಸಾರ್ವಜನಿಕ ಉದ್ಯಾನವನಗಳು, ಮಾರುಕಟ್ಟೆಗಳು, ಧಾರ್ಮಿಕ ಪ್ರದೇಶಗಳಲ್ಲಿ ಸಮಾರಂಭಗಳು, ಸಭೆಗಳನ್ನು ನಡೆಸುವುದನ್ನು ಹಾಗೂ ಗುಂಪು ಗುಂಪಾಗಿ ಸೇರಿ ಪ್ರತಿಭಟನೆ, ಮುಷ್ಕರ ನಡೆಸುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಹಾಗೂ ಸುರಕ್ಷಿತ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು. ತಪ್ಪಿದಲ್ಲಿ ಸರಕಾರದ ಆದೇಶ/ಮಾರ್ಗಸೂಚಿಯಂತೆ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ಕ್ರಮವಹಿಸುತ್ತಾರೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪ್ರಾರ್ಥನಾ ಮಂದಿರ, ಪೂಜಾ ಮಂದಿರ/ದೇವಸ್ಥಾನಗಳಲ್ಲಿ ಆಡಳಿತ ಮಂಡಳಿ ವತಿಯಿಂದ ನಡೆಸುವ ದೈನಂದಿನ ಧಾರ್ಮಿಕ ಕಾರ್ಯಕ್ರಮ, ಪ್ರಾರ್ಥನೆ ಇತ್ಯಾದಿಗಳನ್ನು ಸರಕಾರ ಮಾರ್ಗಸೂಚಿಯಂತೆ ಸ್ಯಾನಿಟೈಸರ್ ಬಳಕೆ ಮಾಡುವುದು ಇತ್ಯಾದಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ನಡೆಸಬೇಕು. ಸಾರ್ವಜನಿಕರು ಸೇರುವ ಪ್ರದೇಶ, ಹೋಟೆಲ್, ಬಾರ್ ಆಂಡ್ ರೆಸ್ಟೋರೆಂಟ್, ಅಂಗಡಿ ಮುಂಗಟ್ಟುಗಳು ಇತ್ಯಾದಿ ಸ್ಥಳಗಳಲ್ಲಿನ ಮಾಲಕರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ವ್ಯವಸ್ಥೆಯನ್ನು ಮಾಡಿಕೊಂಡು ಈ ಬಗ್ಗೆ ಗ್ರಾಹಕರಿಗೂ ಅರಿವು ಮೂಡಿಸಿ ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಬೇಕೆಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಸರಕಾರ ಮಾರ್ಗಸೂಚಿಗಳು/ ಆದೇಶಗಳನ್ನು ಯಾವುದೇ ವ್ಯಕ್ತಿ ಉಲ್ಲಂಘಿಸಿದಲ್ಲಿ ಅಂತವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ-2005ರ ವಿಭಾಗ 51 ರಿಂದ 60ರನ್ವಯ ಐ.ಪಿ.ಸಿ ಸೆಕ್ಷನ್ 188ರಂತೆ ಹಾಗೂ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020ರ ವಿಭಾಗ 4, 5ರಂತೆ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ತಿಳಿಸಿದ್ದಾರೆ.







