ಕುಲಪತಿ ಹುದ್ದೆಗೆ ಲಾಬಿಯ ಹಿಂದಿನ ಷಡ್ಯಂತರ ಬಯಲುಗೊಳಿಸಲು ಎಸ್‌ಡಿಪಿಐ ಒತ್ತಾಯ
ಮಂಗಳೂರು, ಮಾ.31: ಕುಲಪತಿ ಹುದ್ದೆ ದೊರಕಿಸಿಕೊಡುವುದಾಗಿ ನಂಬಿಸಿ 17.50 ಲಕ್ಷ ರೂ.ವಂಚಿಸಿದ ಪ್ರಕರಣದಲ್ಲಿ ಹಿಂದುತ್ವವಾದಿ ಸಂಘಟನೆಯ ನಾಯಕ ಮತ್ತು ರಾಮಸೇನೆಯ ಸಂಸ್ಥಾಪಕ ಪ್ರಸಾದ್ ಅತ್ತಾವರನನ್ನು ಬಂಧಿಸಿರುವ ಪೊಲೀಸರ ಕಾರ್ಯ ಶ್ಲಾಘನೀಯ. ಆದರೆ, ಈ ಹುದ್ದೆಗಾಗಿ ನಡೆದ ಲಾಬಿಯ ಹಿಂದಿನ ಷಡ್ಯಂತ್ರ ಬಯಲಾಗಬೇಕಿದೆ ಎಂದು ಎಸ್‌ಡಿಪಿಐ ದ.ಕ.ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಒತ್ತಾಯಿಸಿದ್ದಾರೆ.
ಪ್ರಸ್ತುತ ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರಕಾರದಲ್ಲಿ ಭ್ರಷ್ಟಾಚಾರ, ಲಾಬಿ, ವಂಚನೆಯು ನಡೆಯುತ್ತಲೇ ಇದೆ. ದ.ಕ. ಜಿಲ್ಲೆಯಲ್ಲಿ ಕೂಡ ಸರಕಾರಿ ಅಧಿಕಾರಿಗಳನ್ನು ತಮಗೆ ಬೇಕಾದ ಜಾಗಕ್ಕೆ ವರ್ಗಾವಣೆ ಮಾಡುವುದು, ಉನ್ನತ ಹುದ್ದೆಗೆ ಭಡ್ತಿ ಕೊಡಿಸುವಂತಹ ದೊಡ್ಡ ಲಾಬಿ ಇದರ ಹಿಂದಿರುವಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಕುಲಪತಿ ಹುದ್ದೆಗೆ ನೇಮಕ ಮಾಡುವುದಾಗಿ ಹೇಳಿ ರಾಮಸೇನೆಯ ಸಂಸ್ಥಾಪಕ ಲಕ್ಷ ಗಟ್ಟಲೆ ವಂಚಿಸಿರುವುದು ಇದಕ್ಕೆ ಬಹು ದೊಡ್ಡ ಸಾಕ್ಷಿಯಾಗಿದೆ. ಹಾಗಾಗಿ ಈ ಪ್ರಕರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಮತ್ತು ಇದರಲ್ಲಿ ಸಂಸದರ, ಶಾಸಕರ ಮತ್ತು ಹಿಂದುತ್ವವಾದಿ ನಾಯಕರ ಪಾಲೆಷ್ಟು ಎಂಬುದನ್ನು ತನಿಖೆಗೆ ಒಳಪಡಿಸಿ ವಂಚನೆ ಜಾಲದ ಹಿಂದಿನ ಷಡ್ಯಂತ್ರವನ್ನು ಬಯಲಿಗೆಳೆಯಬೇಕು. ಅಲ್ಲದೆ ಅವರ ಮೇಲೆಯೂ ವಂಚನೆಯ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.





