ಹೊರ ರಾಜ್ಯ, ಹೊರ ಜಿಲ್ಲೆಗಳ ಪ್ರವಾಸಿಗರ ತಪಾಸಣೆ ಕಡ್ಡಾಯ: ಚಿಕ್ಕಮಗಳೂರು ಡಿಸಿ ಕೆ.ಎನ್.ರಮೇಶ್

ಚಿಕ್ಕಮಗಳೂರು, ಮಾ.31: ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ಜಿಲ್ಲೆಯ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಚೆಕ್‍ಪೋಸ್ಟ್ ಗಳನ್ನು ನಿರ್ಮಿಸಿ ಸದರಿ ಚೆಕ್‍ಪೋಸ್ಟ್ ಗಳಲ್ಲಿ ವಾಹನಗಳನ್ನು ತಡೆದು ಪ್ರವಾಸಿಗರ ಆರೋಗ್ಯದ ತಪಾಸಣೆ ಮಾಡಲು ಅಧಿಕಾರಿ/ಸಿಬ್ಬಂದಿ ತಂಡಗಳನ್ನು ರಚಿಸುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಕೆ.ಎನ್.ರಮೇಶ್ ಆದೇಶ ಹೊರಡಿಸಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಮಾಗಡಿ ಹ್ಯಾಂಡ್ ಪೋಸ್ಟ್ ನಲ್ಲಿ ನಿರ್ಮಿಸಿರುವ ಚೆಕ್ ಪೋಸ್ಟ್ ಗೆ ನಿಯೋಜಿಸಲಾಗಿರುವ ಅಧಿಕಾರಿ ಮತ್ತು ಸಿಬ್ಬಂದಿ ವಿವಿಧ ಕಾರಣಗಳಿಂದ ಲಭ್ಯವಿಲ್ಲದ ಕಾರಣ ಸದರಿಯವರ ಬದಲಾಗಿ ಮುಗುಳವಳ್ಳಿ ಗ್ರಾಮ ಪಂಚಾಯತ್ ಪಿಡಿಒ, ಬಿಲ್ ಕಲೆಕ್ಟರ್, ಮುಗುಳುವಳ್ಳಿ ವೃತ್ತದ ಗ್ರಾಮ ಲೆಕ್ಕಿಗರನ್ನು ನಿಯೋಜಿಸಲಾಗಿದೆ. ಚೆಕ್ ಪೋಸ್ಟ್ ಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಕೇರಳ, ಆಂಧ್ರಪ್ರದೇಶ, ಪಂಜಾಬ್ ರಾಜ್ಯಗಳಿಂದ ಬರುವ ಪ್ರವಾಸಿಗರು 72 ಗಂಟೆ ಅವಧಿಯೊಳಗಿರುವ ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಮಾಡಿಸಿಕೊಂಡು ಬರುವುದು ಕಡ್ಡಾಯವಾಗಿದ್ದು, ಈ ಬಗ್ಗೆ ಪರಿಶೀಲಿಸುವುದು, ಒಂದು ವೇಳೆ ಈ ತಪಾಸಣೆ ವರದಿ ಇಲ್ಲದಿದ್ದಲ್ಲಿ ಅಗತ್ಯ ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮೇಲ್ಕಂಡ ರಾಜ್ಯಗಳಿಂದ ಬರುವವರನ್ನು ಹೊರತುಪಡಿಸಿ ಇತರ ಜಿಲ್ಲೆಗಳ ಅಥವಾ ರಾಜ್ಯಗಳ ಪ್ರವಾಸಿಗರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡುವುದು, ರೋಗ ಲಕ್ಷಣ ಕಂಡು ಬರುವ ಪ್ರವಾಸಿಗರನ್ನು ಹತ್ತಿರದ ಸ್ಥಳೀಯ ಪ್ರಾಥಮಿಕ ಕೇಂದ್ರಕ್ಕೆ ಮುಂದಿನ ಚಿಕಿತ್ಸೆಗಾಗಿ ಕಳುಹಿಸಿಕೊಡುವುದು ಮತ್ತು ಇವರ ಸಂಪರ್ಕದಲ್ಲಿದ್ದವರ ಆರೋಗ್ಯವನ್ನು ತಪಾಸಣೆ ಮಾಡಿ ಕ್ರಮ ಕೈಗೊಳ್ಳುವುದು. ಚೆಕ್‍ಪೋಸ್ಟ್ ಗಳಲ್ಲಿ ಕೋವಿಡ್-19ಗೆ ಸಂಬಂಧಿಸಿದ ಹಾಗೂ ಇತರ ಅಗತ್ಯವಿರುವ ಎಲ್ಲಾ ಪರಿಕರಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರು ಒದಗಿಸಬೇಕೆಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







