ತಮಿಳುನಾಡು: ಆದಿತ್ಯನಾಥ್ ಮೆರವಣಿಗೆ ವೇಳೆ ಅಂಗಡಿಗಳಿಗೆ ಕಲ್ಲು ತೂರಾಟ

ಫೈಲ್ ಫೋಟೊ (source: PTI)
ಕೊಯಮತ್ತೂರು, ಎ.1: ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಸ್ವಾಗತಿಸುವ ಮೆರವಣಿಗೆ ಹಿನ್ನೆಲೆಯಲ್ಲಿ ಬುಧವಾರ ಅಂಗಡಿಗಳನ್ನು ಮುಚ್ಚಬೇಕು ಎಂದು ಒತ್ತಾಯಿಸಿದ ಕೆಲ ಬಿಜೆಪಿ ಕಾರ್ಯಕರ್ತರು ಅಂಗಡಿಗಳತ್ತ ಕಲ್ಲು ತೂರಾಟ ನಡೆಸಿದ್ದರು ಎಂದು ಆಪಾದಿಸಲಾಗಿದೆ.
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಬಿಜೆಪಿಯ ಸ್ಥಳೀಯ ಅಭ್ಯರ್ಥಿ ವಸಂತಿ ಶ್ರೀನಿವಾಸನ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮತ್ತು ಸಂಘಟನೆಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿವೆ. ಜತೆಗೆ ಎಪ್ರಿಲ್ 6ರಂದು ನಡೆಯುವ ಚುನಾವಣೆಯಲ್ಲಿ ಕೊಯಮತ್ತೂರು ದಕ್ಷಿಣ ಕ್ಷೇತ್ರದ ಅವರ ಉಮೇದುವಾರಿಕೆ ರದ್ದುಪಡಿಸಬೇಕು ಎಂದು ಒತ್ತಾಯಿಸಿವೆ.
ಕೆಲ ಬೀದಿಬದಿ ವ್ಯಾಪಾರಸ್ಥರ ಮೇಲೂ ಕಲ್ಲುತೂರಾಟ ನಡೆಸಲಾಗಿದೆ ಎಂದು ಆಪಾದಿಸಿ ತಂತೈ ಪೆರಿಯ ದ್ರಾವಿಡ ಕಳಗಂ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಎಸ್ಡಿಪಿಐ ದೂರು ನೀಡಿವೆ. ಬಿಜೆಪಿ ಹಾಗೂ ಹಿಂದು ಮುನ್ನಣಿ ಕಾರ್ಯಕರ್ತರು ಮೋಟರ್ಸೈಕಲ್ ರ್ಯಾಲಿ ನಡೆಸಲು ಅನುಮತಿ ಪಡೆದಿರಲಿಲ್ಲ. ಆದ್ದರಿಂದ ಚುನಾವಣಾ ಸಂಹಿತೆ ಉಲ್ಲಂಘಿಸಿದಂತಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ದೂರುಗಳ ಆಧಾರದಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.