ಅಗ್ರಸ್ಥಾನ ಉಳಿಸಿಕೊಂಡ ವಿರಾಟ್ ಕೊಹ್ಲಿ
► ನಾಲ್ಕನೇ ಸ್ಥಾನಕ್ಕೆ ಜಾರಿದ ಜಸ್ಪ್ರಿತ್ ಬುಮ್ರ ► ಐಸಿಸಿ ಏಕದಿನ ರ್ಯಾಂಕಿಂಗ್
ದುಬೈ: ಭಾರತದ ನಾಯಕ ವಿರಾಟ್ ಕೊಹ್ಲಿ ಬುಧವಾರ ಬಿಡುಗಡೆಯಾಗಿರುವ ಐಸಿಸಿ ಏಕದಿನ ರ್ಯಾಂಕಿಂಗ್ನ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಬೌಲರ್ಗಳ ಪಟ್ಟಿಯಲ್ಲಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೊದಲೆರಡು ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 56 ಹಾಗೂ 66 ರನ್ ಗಳಿಸಿದ್ದಾರೆ. ಈ ಮೂಲಕ ಒಟ್ಟು 870 ಅಂಕ ಸಂಪಾದಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ಗಳ ಸರಣಿಯಲ್ಲಿ ವಿಶ್ರಾಂತಿ ಪಡೆದಿದ್ದ ಬುಮ್ರಾ, ಬೌಲರ್ಗಳ ಪೈಕಿ ನಾಲ್ಕನೇ ಸ್ಥಾನದಲ್ಲಿದ್ದು, ಒಟ್ಟು 690 ಅಂಕ ಗಳಿಸಿದ್ದಾರೆ.
ಭಾರತದ ಸೀಮಿತ ಓವರ್ ಕ್ರಿಕೆಟ್ ತಂಡದ ಉಪ-ನಾಯಕ ರೋಹಿತ್ ಶರ್ಮಾ ಮೂರನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನದ ಬಾಬರ್ ಆಝಂ ಎರಡನೇ ಸ್ಥಾನದಲ್ಲಿದ್ದಾರೆ. ಕೆ.ಎಲ್. ರಾಹುಲ್ 31ನೇ ಸ್ಥಾನದಿಂದ 27ನೇ ಸ್ಥಾನಕ್ಕೇರಿದ್ದಾರೆ.
35 ಹಾಗೂ 64 ರನ್ ಗಳಿಸಿರುವ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಜೀವನಶ್ರೇಷ್ಠ 42ನೇ ಸ್ಥಾನಕ್ಕೇರಿದ್ದಾರೆ. ರಿಷಭ್ ಪಂತ್ ಅಗ್ರ-100ರೊಳಗೆ ಪ್ರವೇಶಿಸಿದ್ದಾರೆ.
ಅಂತಿಮ ಏಕದಿನ ಪಂದ್ಯದಲ್ಲಿ 42 ರನ್ಗೆ3 ವಿಕೆಟ್ಗಳನ್ನು ಕಬಳಿಸಿದ್ದ ವೇಗದ ಬೌಲರ್ ಭುವನೇಶ್ವರ ಕುಮಾರ್ 11ನೇ ಸ್ಥಾನಕ್ಕೇರಿದ್ದಾರೆ. 2017ರ ಸೆಪ್ಟಂಬರ್ ನಲ್ಲಿ 10ನೇ ಸ್ಥಾನಕ್ಕೇರಿದ್ದರು.
ಇಂಗ್ಲೆಂಡ್ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ 67 ರನ್ಗೆ 4 ವಿಕೆಟ್ ಗೊಂಚಲು ಪಡೆದಿದ್ದ ಶಾರ್ದೂಲ್ ಠಾಕೂರ್ 93ನೇ ಸ್ಥಾನದಿಂದ 80ನೇ ಸ್ಥಾನಕ್ಕೇರಿದ್ದಾರೆ.
ದ್ವಿತೀಯ ಏಕದಿನ ಪಂದ್ಯದಲ್ಲಿ 52 ಎಸೆತಗಳಲ್ಲಿ 99 ರನ್ ಗಳಿಸಿದ್ದ ಇಂಗ್ಲೆಂಡ್ ಆಲ್ರೌಂಡರ್ ಬೆನ್ಸ್ಟೋಕ್ಸ್ ನಾಲ್ಕು ಸ್ಥಾನ ಮೇಲಕ್ಕೇರಿ 24ನೇ ಸ್ಥಾನ ತಲುಪಿದರು. ಆಲ್ ರೌಂಡ್ ರ್ಯಾಂಕಿಂಗ್ನಲ್ಲಿ ಎರಡನೇ ಸ್ಥಾನಕ್ಕೇರಿದರು. 2ನೇ ಏಕದಿನ ಪಂದ್ಯದಲ್ಲಿ 124 ರನ್ ಗಳಿಸಿದ್ದ ಜಾನಿ ಬೈರ್ಸ್ಟೋವ್ ಜೀವನಶ್ರೇಷ್ಠ 796 ಅಂಕ ಗಳಿಸಿ ಏಳನೇ ಸ್ಥಾನವನ್ನು ಉಳಿಸಿಕೊಂಡರು. ಬೌಲರ್ಗಳ ಪೈಕಿ ಮೊಯಿನ್ ಅಲಿ 9 ಸ್ಥಾನ ಮೇಲಕ್ಕೇರಿ 46ನೇ ಸ್ಥಾನ ತಲುಪಿದ್ದಾರೆ.
ಟ್ವೆಂಟಿ-20 ರ್ಯಾಂಕಿಂಗ್: ಕುಸಿತ ಕಂಡ ರಾಹುಲ್, ವಿರಾಟ್ ಕೊಹ್ಲಿ ಇದೇ ವೇಳೆ ಟ್ವೆಂಟಿ-20 ರ್ಯಾಂಕಿಂಗ್ನಲ್ಲಿ ರಾಹುಲ್ ಹಾಗೂ ಕೊಹ್ಲಿ ಕ್ರಮವಾಗಿ 5ನೇ ಹಾಗೂ ಆರನೇ ಸ್ಥಾನಕ್ಕೆ ಕುಸಿದಿದ್ದಾರೆ. ಅಗ್ರ-10 ಬೌಲರ್ಗಳ ಪಟ್ಟಿ ಹಾಗೂ ಆಲ್ರೌಂಡರ್ ಪಟ್ಟಿಯಲ್ಲಿ ಯಾವ ಭಾರತೀಯ ಆಟಗಾರನೂ ಇಲ್ಲ.
ಕೊಹ್ಲಿ ಬ್ಯಾಟ್ಸ್ಮನ್ಗಳ ರ್ಯಾಂಕಿಂಗ್ನಲ್ಲಿ 5ನೇ ಸ್ಥಾನ ಉಳಿಸಿಕೊಂಡಿದ್ದಾರೆ. ವಿಕೆಟ್ಕೀಪರ್-ಬ್ಯಾಟ್ಸ್ಮನ್ ರಿಷಭ್ ಪಂತ್ ಹಾಗೂ ರೋಹಿತ್ ಶರ್ಮಾ ಏಳನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.