ಕೇಂದ್ರದ ನೂತನ ಐಟಿ ನಿಯಮಗಳನ್ನು ಪ್ರಶ್ನಿಸಿ ಹೈಕೋರ್ಟ್ ಕದ ತಟ್ಟಿದ ಕನ್ನಡ ವೆಬ್‍ಸೈಟ್ 'ಪ್ರತಿಧ್ವನಿ'

ಹೊಸದಿಲ್ಲಿ: ಕನ್ನಡ ಸುದ್ದಿ ತಾಣ 'ಪ್ರತಿಧ್ವನಿ'ಯನ್ನು ಮುನ್ನಡೆಸುವ ಟ್ರುತ್ ಪ್ರೊ ಫೌಂಡೇಶನ್ ಇಂಡಿಯಾ ಎಂಬ ಸಂಸ್ಥೆಯು ಕೇಂದ್ರ ಸರಕಾರ ಡಿಜಿಟಲ್ ಸುದ್ದಿ ತಾಣಗಳನ್ನು ನಿಯಂತ್ರಿಲು ಜಾರಿಗೆ ತಂದಿರುವ ಹೊಸ ಐಟಿ ನಿಯಮಗಳನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‍ನ ಮೊರೆ ಹೋಗಿದೆ.
ದಿ ವೈರ್, ಲೈವ್ ಲಾ ಹಾಗೂ ದಿ ಕ್ವಿಂಟ್ ಸುದ್ದಿ ತಾಣಗಳ ನಂತರ ಹೊಸ ನಿಯಮಗಳ ವಿರುದ್ಧ ನ್ಯಾಯಾಲಯದ ಮೊರೆ ಹೋದ ನಾಲ್ಕನೇ ಡಿಜಿಟಲ್ ಸುದ್ದಿ ತಾಣ ʼಪ್ರತಿಧ್ವನಿ' ಆಗಿದೆ.
ಡಿಜಿಟಲ್ ಸುದ್ದಿ ತಾಣಗಳನ್ನು ಬಾಧಿಸುವ ಐಟಿ ನಿಯಮಗಳನ್ನಷ್ಟೇ ತಾನು ಪ್ರಶ್ನಿಸಿದ್ದು ಒಟಿಟಿ ಪ್ಲಾಟ್‍ಫಾರ್ಮ್ ಮತ್ತಿತರ ಸಂಸ್ಥೆಗಳನ್ನು ನಿಯಂತ್ರಿಸುವ ನಿಯಮಗಳನ್ನು ಪ್ರಶ್ನಿಸಿಲ್ಲ ಎಂದು ಟ್ರುತ್ ಪ್ರೊ ಫೌಂಡೇಶನ್ ಇಂಡಿಯಾ ಸಲ್ಲಿಸಿದ ಅಪೀಲಿನಲ್ಲಿ ಹೇಳಲಾಗಿದೆ.
ಮಾಹಿತಿ ತಂತ್ರಜ್ಞಾನ ಕಾಯಿದೆ 2000ರ ವ್ಯಾಪ್ತಿಯನ್ನು ಮೀರಿ ಸರಕಾರ ಡಿಜಿಟಲ್ ಸುದ್ದಿ ತಾಣಗಳಿಗೆ `ನೀತಿ ಸಂಹಿತೆ' ಮೂಲಕ ನಿಗಾ ಇಡಲು ಬಯಸಿದೆ ಹಾಗೂ ʼಉತ್ತಮ ಅಭಿರುಚಿ' ʼಸಭ್ಯತೆ' ಮುಂತಾದ ಪದಗಳನ್ನು ಉಲ್ಲೇಖಿಸಿ ಅಸ್ಪಷ್ಟ ಷರತ್ತುಗಳನ್ನು ವಿಧಿಸಿದೆ ಎಂದು ಫೌಂಡೇಶನ್ ತನ್ನ ಅಪೀಲಿನಲ್ಲಿ ಹೇಳಿದೆ.





