ಕೋವಿಡ್ ಎರಡನೆ ಅಲೆ ತಡೆಗೆ ಮತ್ತಷ್ಟು ಕಠಿಣ ಕ್ರಮ: ಬಿಬಿಎಂಪಿ ನೂತನ ಮುಖ್ಯ ಆಯುಕ್ತ ಗೌರವ್ ಗುಪ್ತಾ

ಬೆಂಗಳೂರು, ಎ.1: ಕೋವಿಡ್ ಎರಡನೇ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಜಾತ್ರೆ, ಸಮಾರಂಭಗಳಿಗೆ ಮಿತಿ ಹೇರಿದೆ. ಮುಂದಿನ ದಿನಗಳಲ್ಲಿ ಈ ಸಂಬಂಧ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
ಗುರುವಾರ ಪಾಲಿಕೆಯ ಆಯುಕ್ತರ ಕಚೇರಿಯಲ್ಲಿ ಮುಖ್ಯ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಕಳೆದ 6-7 ತಿಂಗಳಲ್ಲಿ ನಗರದಲ್ಲಿರುವ ಸಮಸ್ಯೆಗಳನ್ನು ಹತ್ತಿರದಿಂದ ನೋಡಲಾಗಿದೆ. ನಗರದಲ್ಲಿ ಕೋವಿಡ್ ಸೋಂಕು ಕ್ರಮೇಣ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕೋವಿಡ್ ಸೋಂಕನ್ನು ನಿಯಂತ್ರಣಕ್ಕೆ ತರಲು ಸೂಕ್ತ ಕ್ರಮ ತೆಗೆದುಕೊಳ್ಳುವ ಅವಶ್ಯಕತೆಯಿದೆ ಎಂದರು.
ಎಲ್ಲರೂ ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲನೆ ಮಾಡಬೇಕು. ಸಭೆ, ಸಮಾರಂಭಗಳಿಗೆ ಹೋಗುವುದನ್ನು ಕಡಿಮೆ ಮಾಡಬೇಕು. ಈ ಸಂಬಂಧ ಈಗಾಗಲೇ ಜಾತ್ರೆ, ಸಮಾರಂಭಗಳು ನಡೆಸುವುದನ್ನು ಸರಕಾರ ಮಿತಿಗೊಳಿಸಿದೆ. ಮುಂದೆ ಇನ್ನೂ ಕಟ್ಟುನಿಟ್ಟಿನ ಕ್ರಮ ಕೈಗೊಂಡು ನಿಯಂತ್ರಣಕ್ಕೆ ತರಲಾಗವುದು. ಪಾಲಿಕೆಯಲ್ಲಿರುವ ಕಾರ್ಯತಂತ್ರವನ್ನು ಈಗಾಗಲೇ ಸಕ್ರಿಯಗೊಳಿಸಲಾಗಿದ್ದು, ಎಲ್ಲರೂ ಕ್ರಿಯಾಶೀಲರಾಗಿದ್ದಾರೆ. ಆಡಳಿತವನ್ನು ಇನ್ನಷ್ಟು ಚುರುಕುಗೊಳಿಸಿ ಕಾರ್ಯನಿರ್ವಹಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಅಧಿಕಾರ ಹಸ್ತಾಂತರ ಮಾಡಿದ ಬಳಿಕ ನಿಕಟಪೂರ್ವ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಮಾತನಾಡಿ, ನಗರದಲ್ಲಿ ಡಿಸೆಂಬರ್ ತಿಂಗಳಲ್ಲಿ 600 ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ಕಡಿಮೆಯಾಗಿದ್ದ ಕೋವಿಡ್ ಪ್ರಕರಣಗಳು, ಮಾರ್ಚ್ ನಲ್ಲಿ ಅನೇಕ ಮದುವೆ ಸಮಾರಂಭಗಳು, ಪ್ರತಿಭಟನೆ, ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿರುವ ಕಾರಣ ಹೆಚ್ಚಾಗುತ್ತಿವೆ ಎಂದು ಹೇಳಿದರು.
ನಗರದಲ್ಲಿ ಹೆಚ್ಚು ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ಮಾಡಿ, ಐಸೋಲೇಟ್ ಮಾಡಿ ಕಾಂಟ್ಯಾಕ್ಟ್ ಟ್ರೇಸ್ ಮಾಡಲಾಗುತ್ತಿದೆ. ಇದರಿಂದ ಕೋವಿಡ್ ಸೋಂಕು ಹರಡುವ ಪ್ರಮಾಣ ಕಡಿಮೆಯಾಗಲಿದೆ. ಕೋವಿಡ್ ಸೋಂಕು 20 ರಿಂದ 40 ವರ್ಷದೊಳಗಿರುವವರಿಗೆ ಪತ್ತೆಯಾಗುತ್ತಿದೆ. ಮರಣ ಪ್ರಮಾಣ ತೀರಾ ಕಡಿಮೆಯಿದ್ದು, 60 ವರ್ಷ ಮೇಲ್ಪಟ್ಟವರು ಮಾತ್ರ ಮೃತಪಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕಳೆದ 7 ತಿಂಗಳಿಂದ ಗೌರವ್ ಗುಪ್ತಾ ಆಡಳಿತಗಾರರಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡಲಾಗಿದೆ. ಇದೀಗ ಅವರೇ ಆಯುಕ್ತರಾಗುತ್ತಿದ್ದು, ಜನರು ಇನ್ನೂ ಉತ್ತಮ ಮಟ್ಟದ ಆಡಳಿತವನ್ನು ನಿರೀಕ್ಷಿಸಬಹುದು. ಅವರಿಗೆ ಹೆಚ್ಚು ಅನುಭವವಿದ್ದು, ಮುಂದಿನ ದಿನಗಳಲ್ಲಿ ನಗರದ ಸಮಸ್ಯೆ ನಿವಾರಿಸಲು ಕ್ರಮವಹಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ವೇಳೆ ವಿಶೇಷ ಆಯುಕ್ತರುಗಳಾದ ಡಿ.ರಂದೀಪ್, ರಾಜೇಂದ್ರ ಚೋಳನ್, ಮನೋಜ್ ಜೈನ್, ರೆಡ್ಡಿ ಶಂಕರ ಬಾಬು, ಬಸವರಾಜು, ತುಳಸಿ ಮದ್ದಿನೇನಿ, ರವೀಂದ್ರ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ನಗರಾಭಿವೃದ್ಧಿ ಇಲಾಖೆ 2020ರ ಬಿಬಿಎಂಪಿ ಕಾಯ್ದೆಯನುಸಾರ ಹುದ್ದೆಗಳ ಹೆಸರು ಬದಲಾಯಿಸಿರುವ ಹಿನ್ನೆಲೆಯಲ್ಲಿ ಇಂದಿನಿಂದ ಬಿಬಿಎಂಪಿಯ ಆಯುಕ್ತರು ಮುಖ್ಯ ಆಯುಕ್ತರಾಗಿ ಮೇಲ್ದರ್ಜೆಗೇರಿದ್ದಾರೆ. ವಲಯಗಳ ಉಸ್ತುವಾರಿ ಹೊಣೆ ಹೊತ್ತಿದ್ದ ವಿಶೇಷ ಆಯುಕ್ತರು, ವಲಯ ಆಯುಕ್ತರಾಗಿದ್ದಾರೆ. ಹಾಗೂ ಜಂಟಿ ಆಯುಕ್ತರನ್ನು ವಲಯ ಜಂಟಿ ಆಯುಕ್ತರಾಗಿ ಪರಿವರ್ತಿಸಿ ಇಂದಿನಿಂದ ಅನ್ವಯವಾಗುವಂತೆ ಸರಕಾರ ನಿಯೋಜಿಸಿದೆ.
ಬೆಂಗಳೂರಿನಲ್ಲಿ ಕೋವಿಡ್ ಎರಡನೇ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ಸೋಂಕಿತನೊಂದಿಗೆ ಸಂಪರ್ಕ ಹೊಂದಿರುವ 20 ಜನರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಆರೋಗ್ಯಾಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಇದರಿಂದ ಸೋಂಕು ಹರಡುವುದನ್ನು ತಡೆಯುವಲ್ಲಿ ಯಶಸ್ವಿಯಾಗಬಹುದಾಗಿದೆ. ಹಾಗೆಯೇ ಕಟ್ಟುನಿಟ್ಟಿನ ಕ್ವಾರಂಟೈನ್ ಸೇರಿದಂತೆ ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ.
-ಮಂಜುನಾಥ ಪ್ರಸಾದ್, ನಿಕಟಪೂರ್ವ ಅಧ್ಯಕ್ಷ, ಬಿಬಿಎಂಪಿ







