ಬಿಎಸ್ಎಫ್ ಗೆ ಆಯ್ಕೆಯಾದ ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿನಿ ವಿದ್ಯಾ ಹೆಚ್.

ಕುಂದಾಪುರ, ಎ.1: ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿನಿ, ಬೈಂದೂರು ತಾಲೂಕಿನ ಏಳಜಿತ್ ಗ್ರಾಮದ ಹುಣ್ಸೆಮಕ್ಕಿಯ ರಮೇಶ್ ಗೌಡ ಹಾಗೂ ಪಾರ್ವತಿ ದಂಪತಿಯ ಪುತ್ರಿ ವಿದ್ಯಾ ಎಚ್. ಭಾರತೀಯ ಗಡಿ ಭದ್ರಾ ಪಡೆ(ಬಿಎಸ್‌ಎಫ್)ಗೆ ಆಯ್ಕೆಯಾಗಿದ್ದಾರೆ.
ಬ್ಯಾರೀಸ್ ಶಿಕ್ಷಣ ಸಂಸ್ಥೆಯ 2018-19ನೆ ಸಾಲಿನ ಬಿಎಡ್ ವಿದ್ಯಾಥಿನಿಯಾಗಿದ್ದ ಇವರು, ವಿಶ್ವವಿದ್ಯಾಲಯ ಮಟ್ಟದಲ್ಲಿ ಹಲವು ಆಟೋಟ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಸೇನಾ ಸಮವಸ್ತ್ರ ಧರಿಸುವ ವೃತ್ತಿಯನ್ನು ಮಾಡಬೇಕು ಮತ್ತು ಮಹಿಳೆ ಪುರುಷರಷ್ಟೇ ಸಮರ್ಥಳು ಎಂಬುದನ್ನು ನಿರೂಪಿಸಬೇಕೆಂಬ ಮಹದಾಸೆಯನ್ನು ವಿದ್ಯಾರ್ಥಿ ದೆಸೆಯಿಂದಲೇ ಹೊಂದಿದವರಾಗಿದ್ದರು. ಅವರ ಈ ಸಾಧನೆ ಯಿಂದ ಸ್ಪೂರ್ತಿಗೊಂಡು ನಮ್ಮ ವಿದ್ಯಾರ್ಥಿಗಳು ಸೇನೆಗೆ ಸೇರ್ಪಡೆಯಾಗಬೇಕು ಎಂಬುದು ನನ್ನ ಅಭಿಲಾಷೆ ಎಂದು ಬ್ಯಾರೀಸ್ ಸಮೂಹದ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಬ್ಯಾರಿ ಪ್ರತಿಕ್ರಿಯಿಸಿದ್ದಾರೆ.
ಅದೇ ರೀತಿ ವಿದ್ಯಾ ಅವರ ಈ ಹೆಮ್ಮೆಯ ಸಾಧನೆಗೆ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ.ಎಂ.ಅಬ್ದುಲ್ ರೆಹಮಾನ್, ನಿರ್ದೇಶಕರು, ಪ್ರಾಂಶುಪಾಲರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ರಮೇಶ್ ಗೌಡ ಕೃಷಿಕರಾಗಿದ್ದು, ಇವರ ಇಬ್ಬರು ಮಕ್ಕಳಲ್ಲಿ ವಿದ್ಯಾ ಕಿರಿಯವಳು. ವಿದ್ಯಾ ಸಹೋದರ ಖಾಸಗಿ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ವಿದ್ಯಾ ಪ್ರಾಥಮಿಕ ಶಿಕ್ಷಣವನ್ನು ಏಳಜಿತ್ ಶಾಲೆಯಲ್ಲಿ, ಹೈಸ್ಕೂಲ್ ಶಿಕ್ಷಣವನ್ನು ಕೊಲ್ಲೂರಿನಲ್ಲಿ, ಪಿಯುಸಿ ಕುಂದಾಪುರ ಜ್ಯೂನಿಯರ್ ಕಾಲೇಜಿನಲ್ಲಿ, ಬಿಎಸ್ಸಿ ಪದವಿಯನ್ನು ಕುಂದಾಪುರ ಭಂಡರ್‌ಕಾರ್ಸ್ ಕಾಲೇಜಿನಲ್ಲಿ ಪಡೆದಿದ್ದಾರೆ. ಮದ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಸೇನಾ ತರಬೇತಿ ಪಡೆಯಲು ತೆರಳಿರುವ ವಿದ್ಯಾ, ಇಂದಿನಿಂದ ತರಬೇತಿ ಪಡೆಯುತ್ತಿದ್ದಾರೆ.
ಮನೆಯವರ ಪ್ರೋತ್ಸಾಹ ಇಲ್ಲದ ಕಾರಣ ಹೆಣ್ಣು ಮಕ್ಕಳು ಸೇನೆಗೆ ಸೇರುತ್ತಿಲ್ಲ ಮತ್ತು ಹೆಣ್ಣು ಮಕ್ಕಳನ್ನು ಕೇವಲ ಅಡುಗೆ ಮನೆಗಳಿಗೆ ಸೀಮಿತ ಮಾಡಲಾಗುತ್ತಿದೆ. ಈ ಮನೋಭಾವ ಬದಲಾಯಿಸುವ ನಿಟ್ಟಿನಲ್ಲಿ ನಾನು ಸೇನೆಗೆ ಸೇರಿದ್ದೇನೆ. ಮಹಿಳೆಯರು ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ತೋರಿಸುತ್ತೇನೆ. ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲೂ ಸಮಾನ ಅವಕಾಶ ಇದೆ. ಅದನ್ನು ನಾವು ಬಳಸಿಕೊಳ್ಳಬೇಕು. ಪೊಲೀಸ್, ಸೈನ್ಯದಂತಹ ಸಮವಸ್ತ್ರದ ಕೆಲಸಕ್ಕೆ ಸೇರಬೇಕೆಂಬ ಆಸೆ ನನಗೆ ಮೊದಲಿನಿಂದಲೂ ಇತ್ತು. ಈ ಹಿಂದೆ ಸೈನ್ಯದವರನ್ನು ನೋಡುವಾಗ ನನಗೆ ಹೆಮ್ಮೆ ಎನಿಸುತ್ತಿತ್ತು. ಈಗ ಆ ಸ್ಥಾನದಲ್ಲಿ ನಾನು ಇದ್ದೇನೆ ಎಂಬುದು ನನಗೆ ತುಂಬಾ ಸಂತೋಷ ಆಗುತ್ತಿದೆ.
-ವಿದ್ಯಾ ಎಚ್.







