ಅಂಬಾನಿ ನಿವಾಸದ ಸಮೀಪ ಸ್ಫೋಟಕ ಪತ್ತೆ ಪ್ರಕರಣ: ಮುಂಬೈ ಹೊಟೇಲ್ನಲ್ಲಿ ಎನ್ಐಎ ಶೋಧ
ಸಾಂದರ್ಭಿಕ ಚಿತ್ರ
ಮುಂಬೈ, ಎ.1: ಖ್ಯಾತ ಕೈಗಾರಿಕೋದ್ಯಮಿ ಮುಕೇಶ್ ಅಂಬಾನಿ ಅವರ ನಿವಾಸದ ಸಮೀಪ ಸ್ಫೋಟಕ ತುಂಬಿದ ಎಸ್ಯುವಿ ವಾಹನ ಪತ್ತೆ ಹಾಗೂ ಉದ್ಯಮಿ ಮನ್ಸುಖ್ ಹಿರಾನ್ ಅವರ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯು ಗುರುವಾರ ದಕ್ಷಿಣ ಮುಂಬೈಯ ಹೊಟೇಲೊಂದರಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.
ಬಾಬುಲ್ನಾಥ್ ದೇವಾಲಯದ ಸಮೀಪಲ್ಲಿರುವ ಸೋನಿ ಕಟ್ಟಡದಲ್ಲಿರುವ ಹೊಟೇಲ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತಂಡವು ಮಧ್ಯಾಹ್ನ 12.45ರ ವೇಳೆಗೆ ಆಗಮಿಸಿತೆಂದು ಮೂಲಗಳು ತಿಳಿಸಿವೆ.
ಹೊಟೇಲ್ನ ಆವರಣದಿಂದ ನಿರ್ಗಮಿಸುವಂತೆ ಗ್ರಾಹಕರು ಹಾಗೂ ಹೊಟೇಲ್ ಸಿಬ್ಬಂದಿಗೆ ಎನ್ಐಎ ಅಧಿಕಾರಿಗಳು ಸೂಚಿಸಿದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶೋಧ ಕಾರ್ಯ ಮುಂದುವರಿದಿರುವುದಾಗಿ ಅವರು ತಿಳಿಸಿದ್ದಾರೆಂದು ಮೂಲಗಳು ಹೇಳಿವೆ.
ಮುಕೇಶ್ ಅಂಬಾನಿ ನಿವಾಸದ ಹೊರಗೆ ಸ್ಫೋಟಕ ತುಂಬಿದ ವಾಹನ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಕಳೆದ ತಿಂಗಳು ಎನ್ಐಎನಿಂದ ಬಂಧಿತರಾದ ಅಮಾನತುಗೊಂಡ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಝೆ ಅವರನ್ನು ಇತ್ತೀಚೆಗೆ ತನಿಖಾ ಸಂಸ್ಥೆಯು ಬಾಬುಲ್ ನಾಥ್ ಪ್ರದೇಶಕ್ಕೆ ಕರೆತಂದಿತ್ತು.
ಅಂಬಾನಿ ನಿವಾಸದ ಬಳಿ ಕಳೆದ ತಿಂಗಳು ವಾಹನವೊಂದರಲ್ಲಿ ಪತ್ತೆಯಾದ ಜಿಲೆಟಿನ್ ಕಡ್ಡಿಗಳನ್ನು ವಝೆ ಸಂಪಾದಿಸಿದ್ದರು ಎಂದು ಎನ್ಐಎ ಮೂಲಗಳು ಬುಧವಾರ ತಿಳಿಸಿವೆ.
ಮುಖೇಶ್ ಅಂಬಾನಿ ನಿವಾಸದ ಬಳಿಕ ಸ್ಫೋಟಕ ತುಂಬಿದ ಹಾಗೂ ಉದ್ಯಮಿ ಮನ್ಸುಖ್ ಹಿರಾನ್ ಅವರ ಕೊಲೆ ಪ್ರಕರಣದಲ್ಲಿ ವಝೆ ಅವರ ಪಾತ್ರವಿದೆಯೆಂಬ ಆರೋಪಗಳ ಬಗ್ಗೆ ಎನ್ಐಎ ತನಿಖೆ ನಡೆಸುತ್ತಿದೆ.