ಸಿಎಂ ಯಡಿಯೂರಪ್ಪ ಬೆನ್ನಿಗೆ ನಿಂತ ಬಿಜೆಪಿ ನಾಯಕರು: ಸಚಿವ ಈಶ್ವರಪ್ಪ ರಾಜೀನಾಮೆ ಸಾಧ್ಯತೆ ?

ಫೈಲ್ ಚಿತ್ರ
ಬೆಂಗಳೂರು, ಎ. 1: ‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸಿಎಂ ಬಿಎಸ್ವೈ ಹಸ್ತಕ್ಷೇಪ ಮಾಡುತ್ತಿದ್ದಾರೆ' ಎಂದು ಆರೋಪಿಸಿ ರಾಜ್ಯಪಾಲರು ಮತ್ತು ಬಿಜೆಪಿ ವರಿಷ್ಠರಿಗೆ ದೂರು ನೀಡಿರುವ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಸಂಪುಟ ಸಹೋದ್ಯೋಗಿಗಳು ಹಾಗೂ ಬಿಜೆಪಿ ಶಾಸಕರೇ ಅಸಮಾಧಾನ ಹೊರಹಾಕಿದ್ದಾರೆ.
ಈ ಮಧ್ಯೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಮುಜುಗರದಿಂದ ತಪ್ಪಿಸಿಕೊಳ್ಳಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಪದಚ್ಯುತಿಗೆ ಪಕ್ಷದ ವರಿಷ್ಟರು ವೇದಿಕೆ ಸಿದ್ಧಪಡಿಸುತ್ತಿದ್ದಾರೆ ಎನ್ನಲಾಗಿದ್ದು, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಪಂಚರಾಜ್ಯಗಳ ಚುನಾವಣೆ ಬಳಿಕ ಈ ವಿಚಾರಕ್ಕೆ ಸ್ಪಷ್ಟತೆ ದೊರೆಯಲಿದೆ ಎಂದು ಗೊತ್ತಾಗಿದೆ.
ಮೇಲ್ಕಂಡ ಬೆಳವಣಿಗೆಗಳ ನಡುವೆ ಸಚಿವರಾದ ಬಸವರಾಜ ಬೊಮ್ಮಾಯಿ, ಆರ್.ಅಶೋಕ್, ಬಿ.ಸಿ.ಪಾಟೀಲ್, ಡಾ.ಕೆ.ಸುಧಾಕರ್, ಶಾಸಕ ರೇಣುಕಾಚಾರ್ಯ ಸೇರಿದಂತೆ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಬೆಳಗಾವಿ ಲೋಕಸಭಾ ಕ್ಷೇತ್ರ, ಬೀದರ್ ಜಿಲ್ಲೆ ಬಸವಕಲ್ಯಾಣ ಹಾಗೂ ರಾಯಚೂರಿನ ಮಸ್ಕಿ ಕ್ಷೇತ್ರಗಳ ಉಪಚುನಾವಣೆ ಗೆಲ್ಲುವ ಮೂಲಕ ವರಿಷ್ಠರ ಮುಂದೆ ತಮ್ಮ ‘ಶಕ್ತಿ ಪ್ರದರ್ಶನ'ಕ್ಕೆ ಸಿದ್ಧತೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.
ಹಲವು ತಿಂಗಳುಗಳಿಂದ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತವರ ಪುತ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಭ್ರಷ್ಟಾಚಾರ, ಸ್ವಜನಪಕ್ಷಪಾತ, ವರ್ಗಾವಣೆ ದಂಧೆ ಸೇರಿದಂತೆ ಆಡಳಿತದಲ್ಲಿ ಸಿಎಂ ಕುಟುಂಬದ ಸದಸ್ಯರು ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಶಾಸಕ ಯತ್ನಾಳ್ ಬಹಿರಂಗ ವಾಗ್ದಾಳಿ ನಡೆಸಿದರೂ, ಹೈಕಮಾಂಡ್ ಯಾವುದೇ ಕ್ರಮ ಕೈಗೊಂಡಿಲ್ಲ.
ಯತ್ನಾಳ್ ಹೇಳಿಕೆಗೆ ಪುಷ್ಟಿ: ಮೇ 2ರ ಹೊತ್ತಿಗೆ ಸಿಎಂ ಬದಲಾವಣೆ ಸಾಧ್ಯತೆಗಳಿವೆ ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆ ಪುಷ್ಟಿ ನೀಡುವ ರೀತಿಯಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ವರಿಷ್ಠರು ಮತ್ತು ರಾಜ್ಯಪಾಲರಿಗೆ ಸಿಎಂ ವಿರುದ್ಧ ದೂರು ನೀಡಿದ್ದಾರೆ. ಈ ನಡುವೆಯೇ ಯತ್ನಾಳ್ ಮತ್ತು ಈಶ್ವರಪ್ಪರ ವಿರುದ್ಧ ಸಿಎಂ ಬೆಂಬಲಿಗ ಶಾಸಕರು, ಬಹಿರಂಗ ವಾಗ್ದಾಳಿ ನಡೆಸಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕಿತ್ತು: ‘ಕರ್ನಾಟಕ ರಾಜ್ಯದ ಹಿರಿಯ ಸಚಿವರಾಗಿರುವ ಕೆ.ಎಸ್. ಈಶ್ವರಪ್ಪ ಅವರು ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಆಗುತ್ತಿರುವ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜೊತೆ ಮಾತನಾಡಿ ವಿಷಯ ಬಗೆಹರಿಸಿಕೊಳ್ಳಬೇಕಿತ್ತು' ಎಂದು ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
ಕೆ.ಎಸ್.ಈಶ್ವರಪ್ಪನವರು ಹಿರಿಯ ಸಚಿವರು. ಹೀಗೆ ಬಹಿರಂಗವಾಗಿ ಪತ್ರ ಬರೆಯಬಾರದಿತ್ತು. ಏನೇ ಮನಸ್ತಾಪವಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ಜೊತೆಗೆ ಚರ್ಚಿಸಬೇಕಿತ್ತು, ಪಕ್ಷದ ವೇದಿಕೆಯಲ್ಲಿ ಪ್ರಸ್ತಾಪ ಮಾಡಬೇಕಿತ್ತು, ಅದುಬಿಟ್ಟು ಹೀಗೆ ರಾಜ್ಯಪಾಲರಿಗೆ ಪತ್ರ ಬರೆಯಬಾರದಿತ್ತು ಎಂದು ಅರುಣ್ ಸಿಂಗ್ ತಿಳಿಸಿದ್ದಾರೆ.
ಸದ್ಯ ಪಕ್ಷದ ಎಲ್ಲ ಮುಖಂಡರು ಪಂಚರಾಜ್ಯಗಳ ಚುನಾವಣೆ ಮೇಲೆ ಗಮನ ಹರಿಸಿದ್ದೇವೆ. ಮೂರು ಉಪಚುನಾವಣೆಯನ್ನು ನಾವು ಗೆಲ್ಲಲಿದ್ದೇವೆ. ಬಳಿಕ ನಾವು ಈ ಪತ್ರದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಅರುಣ್ ಸಿಂಗ್, ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಚಿವ ಈಶ್ವರಪ್ಪ ಅವರಿಗೆ ಪರೋಕ್ಷ ಎಚ್ಚರಿಕೆ ರೀತಿಯಲ್ಲಿ ಪ್ರಕಟಣೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.







