ರಾಜ್ಯಪಾಲರಿಗೆ ಈಶ್ವರಪ್ಪ ದೂರು: ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಬೇಕು- ಡಿ.ಕೆ.ಶಿವಕುಮಾರ್

ಬೆಂಗಳೂರು, ಎ.1: ರಾಜ್ಯ ಸರಕಾರದಲ್ಲಿ ಸುಮಾರು 1200 ಕೋಟಿ ರೂ.ಗಳಷ್ಟು ಭ್ರಷ್ಟಾಚಾರ ನಡೆದಿರುವ ಬಗ್ಗೆ ರಾಜ್ಯಪಾಲರಿಗೆ ಮಂತ್ರಿಮಂಡಲದ ಹಿರಿಯ ಸಚಿವರಾದ ಕೆ.ಎಸ್.ಈಶ್ವರಪ್ಪ ದೂರು ನೀಡಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.
ಗುರುವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಸಂಪುಟದ ಹಿರಿಯ ಸಚಿವ ಹಾಗೂ ಮಾಜಿ ಉಪ ಮುಖ್ಯಮಂತ್ರಿಯೊಬ್ಬರು ಮುಖ್ಯಮಂತ್ರಿಯ ವಿರುದ್ಧ ಈ ರೀತಿ ಆರೋಪ ಮಾಡಿರುವುದು ಇದೇ ಮೊದಲು. ಅವರು ಮಾಡಿರುವ ಆರೋಪ ಸತ್ಯವಿರಬಹುದು ಎಂದರು.
ಈ ಹಿಂದೆ ಕೆಲವು ಸಚಿವರು, ಪಕ್ಷೇತರ ಸಚಿವರು ರಾಜ್ಯಪಾಲರಾಗಿದ್ದ ಎಚ್.ಆರ್.ಭಾರದ್ವಾಜ್ ಅವರಿಗೆ ಮಂತ್ರಿಮಂಡಲದ ನೇತೃತ್ವ ವಹಿಸಿಕೊಂಡಿರುವ ಮುಖ್ಯಮಂತ್ರಿಯ ಮೇಲೆ ವಿಶ್ವಾಸ ಇಲ್ಲ ಎಂದು ಪತ್ರ ನೀಡಿದ್ದು ನನಗೆ ನೆನಪಾಗುತ್ತಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ, ಅವರು ಯಾರ ಹೆಸರನ್ನು ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿ ಮಂತ್ರಿ ಮಾಡಿದ್ದಾರೋ ಅವರ ರಾಜೀನಾಮೆ ಪಡೆಯುವುದು ಸೂಕ್ತ ಎಂದು ಶಿವಕುಮಾರ್ ಹೇಳಿದರು.
ಆಡಳಿತ ವೈಫಲ್ಯದ ಬಗ್ಗೆ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ. ಜನರಿಗೆ ಯಾವ ರೀತಿ ಈ ಆಡಳಿತ ಇದೆ, ಭ್ರಷ್ಟಾಚಾರ ಇದೆ ಅನ್ನೋದನ್ನು ಬಯಲು ಮಾಡಬೇಕಾಗುತ್ತದೆ. ಇಲ್ಲಿ ಹಣ ಹಂಚಿಕೆ ಮಾಡಿದ್ದಾರೆ ಅನ್ನೋದಷ್ಟೇ ಪ್ರಶ್ನೆ ಅಲ್ಲ, ಇದರಲ್ಲಿ ಭ್ರಷ್ಟಾಚಾರದ ಕೂಪ ಅಡಗಿದೆ. 1200 ಕೋಟಿ ರೂ.ಗಳಷ್ಟು ಹಣವನ್ನು ಸಂಬಂಧಪಟ್ಟ ಸಚಿವರ ಗಮನಕ್ಕೆ ತರದೆ ಹಂಚಿಕೆ ಮಾಡಲಾಗಿದೆ ಎಂಬ ಆರೋಪ ಮಾಡಲಾಗಿದೆ ಎಂದು ಅವರು ತಿಳಿಸಿದರು.
ನಮ್ಮ ಸರಕಾರದ ಅವಧಿಯಲ್ಲಿ ಹಂಚಿಕೆ ಮಾಡಿದ ಅನುದಾನಗಳನ್ನು ಸ್ಥಗಿತಗೊಳಿಸಿದರು, ಕೆಲವು ಅನುದಾನಗಳನ್ನು ಹಿಂಪಡೆದುಕೊಂಡರು. ನಮ್ಮ ಶಾಸಕರನ್ನು ಕಂಗಾಲು ಮಾಡಿದ್ದಾರೆ. ಇದೀಗ ಆಡಳಿತ ಪಕ್ಷದ ಶಾಸಕರಾದ ಯತ್ನಾಳ್ ಸೇರಿದಂತೆ ಇನ್ನಿತರ ಶಾಸಕರು ಸರಕಾರದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ ಎಂದು ಶಿವಕುಮಾರ್ ಹೇಳಿದರು.
ಮೈತ್ರಿ ಸರಕಾರದಲ್ಲಿ ಎರಡು, ಮೂರು ಸಚಿವರು ಕುಮಾರಸ್ವಾಮಿ ನೇತೃತ್ವದ ಸರಕಾರದಲ್ಲಿ ವಿಶ್ವಾಸವಿಲ್ಲ ಎಂದು ರಾಜ್ಯಪಾಲರಿಗೆ ಪತ್ರ ನೀಡಿದರು. ಇದು ಆಡಳಿತ ವ್ಯವಸ್ಥೆಗೆ ಸಂಬಂಧಿಸಿದ ವಿಷಯ. ಬಹಳ ವ್ಯವಸ್ಥಿತವಾಗಿ ಕಾನೂನುಗಳನ್ನು ಉಲ್ಲೇಖಿಸಿ, ಒಬ್ಬ ಸಚಿವನಿಗೆ ಏನು ಅಧಿಕಾರವಿದೆ, ಒಬ್ಬ ಮುಖ್ಯಮಂತ್ರಿಗೆ ಏನು ಅಧಿಕಾರವಿದೆ ಅನ್ನೋದನ್ನು ಪತ್ರದಲ್ಲಿ ಈಶ್ವರಪ್ಪ ವಿವರಿಸಿದ್ದಾರೆ. ಮುಖ್ಯಮಂತ್ರಿಗೆ ಬೇರೆ ಯಾವ ಆಯ್ಕೆಯೂ ಉಳಿದಿಲ್ಲ. ‘ನೀವು ರಾಜೀನಾಮೆ ನೀಡಿ ಅಥವಾ ರಾಜೀನಾಮೆ ಪಡೆಯಿರಿ’ ಎಂದು ಅವರು ಆಗ್ರಹಿಸಿದರು.







