ಎಪ್ರಿಲ್‌ನಲ್ಲಿ ರಜಾದಿನದಲ್ಲೂ ಕೊರೋನ ಲಸಿಕೆ: ಕೇಂದ್ರ ಸರಕಾರ

ಹೊಸದಿಲ್ಲಿ, ಎ.1: ಎಪ್ರಿಲ್‌ನಲ್ಲಿ ಸರಕಾರಿ ರಜಾದಿನದಂದೂ ಎಲ್ಲಾ ಸರಕಾರಿ ಮತ್ತು ಖಾಸಗಿ ಕೇಂದ್ರಗಳಲ್ಲಿ ಕೊರೋನ ಲಸಿಕೆ ಹಾಕುವ ಅಭಿಯಾನ ಮುಂದುವರಿಸಲು ಸೂಕ್ತ ವ್ಯವಸ್ಥೆ ಮಾಡುವಂತೆ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಗುರುವಾರ ಹೇಳಿದೆ.
ಕೊರೋನ ಸೋಂಕಿನ ಪ್ರಕರಣ ದೇಶದಲ್ಲಿ ಉಲ್ಬಣಗೊಳ್ಳುತ್ತಿರುವ ಮಧ್ಯೆಯೇ, ಕೇಂದ್ರ ಸರಕಾರ ಸೋಂಕಿನ ವಿರುದ್ಧದ ಲಸಿಕೆ ಅಭಿಯಾನ ತೀವ್ರಗೊಳಿಸಲು ಈ ಕ್ರಮ ಕೈಗೊಂಡಿದೆ. ಮಾರ್ಚ್ 31ರಂದು ಎಲ್ಲಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಆಡಳಿತದೊಂದಿಗೆ ವಿವರವಾದ ಚರ್ಚೆಯ ಬಳಿಕ , ದೇಶದ ಜನತೆಗೆ ಅತೀ ಶೀಘ್ರದಲ್ಲಿ ಮತ್ತು ಅತ್ಯುತ್ತಮ ರೀತಿಯಲ್ಲಿ ಲಸಿಕೆ ನೀಡಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.
ಎಪ್ರಿಲ್ 1ರಿಂದ ದೇಶದಲ್ಲಿ ಕೊರೋನ ಲಸಿಕೆ ಪಡೆಯುವ 3ನೇ ಹಂತ ಆರಂಭವಾಗಿದ್ದು ಇದರಲ್ಲಿ 45 ವರ್ಷ ಮೀರಿದ ಎಲ್ಲರಿಗೂ ಲಸಿಕೆ ನೀಡಲಾಗುವುದು. ದೇಶದಲ್ಲಿ ಇದುವರೆಗೆ 6,51,17,896 ಡೋಸ್ ಲಸಿಕೆ ನೀಡಲಾಗಿದೆ. ಗುರುವಾರದ ಬೆಳಗ್ಗಿನವರೆಗಿನ 24 ಗಂಟೆಯಲ್ಲಿ ದೇಶದಲ್ಲಿ 72,330 ಹೊಸ ಕೊರೋನ ಸೋಂಕು ಪ್ರಕರಣ ದಾಖಲಾಗಿದ್ದು ಅಕ್ಟೋಬರ್ 11ರ ಬಳಿಕ ಒಂದೇ ದಿನದಲ್ಲಿ ದಾಖಲಾದ ಅತ್ಯಧಿಕ ಸೋಂಕು ಪ್ರಕರಣ ಇದಾಗಿದೆ. ಇದೇ ಅವಧಿಯಲ್ಲಿ ಸೋಂಕಿನಿಂದಾಗಿ 291 ಸಾವು ಸಂಭವಿಸಿದ್ದು ಇದರೊಂದಿಗೆ ದೇಶದಲ್ಲಿ ಕೊರೋನ ಸೋಂಕಿಗೆ ಬಲಿಯಾದವರ ಸಂಖ್ಯೆ 1,61,240ಕ್ಕೇರಿದೆ ಎಂದು ಆರೋಗ್ಯ ಇಲಾಖೆ ಪ್ರಕಟಿಸಿದೆ.







