ಯುರೋಪ್ನ ಕೊರೋನ ವೈರಸ್ ಲಸಿಕಾ ಕಾರ್ಯಕ್ರಮ ತೃಪ್ತಿಕರವಾಗಿಲ್ಲ: ವಿಶ್ವ ಆರೋಗ್ಯ ಸಂಸ್ಥೆ

ಸಾಂದರ್ಭಿಕ ಚಿತ್ರ
ಕೋಪನ್ಹ್ಯಾಗನ್ (ಡೆನ್ಮಾರ್ಕ್), ಎ. 1: ಯುರೋಪ್ನ ಕೊರೋನ ವೈರಸ್ ಲಸಿಕಾ ಕಾರ್ಯಕ್ರಮ ತೃಪ್ತಿಕರವಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ಅತೃಪ್ತಿ ವ್ಯಕ್ತಪಡಿಸಿದೆ. ಈ ವಲಯದ ಕೊರೋನ ವೈರಸ್ ಸೋಂಕು ‘ಕಳವಳಕಾರಿ’ಯಾಗಿದೆ ಎಂದು ಅದು ಹೇಳಿದೆ.
‘‘ಕೊರೋನ ವೈರಸ್ನಿಂದ ನಮ್ಮನ್ನು ರಕ್ಷಿಸುವ ಅತ್ಯುತ್ತಮ ವಿಧಾನವೆಂದರೆ ಲಸಿಕೆ ಹಾಕಿಸಿಕೊಳ್ಳುವುದು. ಆದರೆ, ಲಸಿಕಾ ಕಾರ್ಯಕ್ರಮ ತುಂಬಾ ನಿಧಾನವಾಗಿದೆ. ಇದರಿಂದಾಗಿಯೇ ಸಾಂಕ್ರಾಮಿಕವು ತನ್ನ ಅಸ್ತಿತ್ವವನ್ನು ವಿಸ್ತರಿಸಿಕೊಳ್ಳುತ್ತಿದೆ. ಇದು ಅಸ್ವೀಕಾರಾರ್ಹ’’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್ ನಿರ್ದೇಶಕ ಹ್ಯಾನ್ಸ್ ಕ್ಲೂಜ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
‘‘ಲಸಿಕೆಗಳ ಉತ್ಪಾದನೆಯ ವೇಗವನ್ನು ಹೆಚ್ಚಿಸುವ ಮೂಲಕ, ಲಸಿಕೆಗಳನ್ನು ಜನರಿಗೆ ಹಾಕುವಲ್ಲಿ ಇರುವ ತಡೆಗಳನ್ನು ನಿವಾರಿಸುವ ಮೂಲಕ ಹಾಗೂ ನಮ್ಮಲ್ಲಿ ಈಗ ದಾಸ್ತಾನಿನಲ್ಲಿರುವ ಪ್ರತಿಯೊಂದು ಡೋಸ್ ಲಸಿಕೆಯನ್ನು ಬಳಸಿಕೊಳ್ಳುವ ಮೂಲಕ ಲಸಿಕಾ ಕಾರ್ಯಕ್ರಮಕ್ಕೆ ನಾವು ವೇಗ ನೀಡಬೇಕಾಗಿದೆ’’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.