ಬೆದರಿಕೆ ಹೇಳಿಕೆ: ಬಿಜೆಪಿ ನಾಯಕ ಶರ್ಮಾ ಅವರಿಗೆ ಚುನಾವಣಾ ಆಯೋಗ ನೋಟಿಸ್

ಹೊಸದಿಲ್ಲಿ, ಎ. 1: ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್)ನ ಪ್ರತಿಪಕ್ಷದ ನಾಯಕ ಹಗ್ರಾಮ ಮೊಹಿಲಾರಿ ವಿರುದ್ಧ ಬೆದರಿಕೆ ಹೇಳಿಕೆ ನೀಡಿದ ಆರೋಪದಲ್ಲಿ ಅಸ್ಸಾಂ ಸಚಿವ ಹಾಗೂ ಬಿಜೆಪಿ ನಾಯಕ ಹಿಮಾಂತ ಬಿಸ್ವಾ ಶರ್ಮಾ ಅವರಿಗೆ ಚುನಾವಣಾ ಆಯೋಗ ಗುರುವಾರ ಶೋಕಾಸ್ ನೋಟಿಸು ಜಾರಿ ಮಾಡಿದೆ.
ಎಪ್ರಿಲ್ 2ರಂದು ಸಂಜೆ 5 ಗಂಟೆ ಒಳಗೆ ಪ್ರತಿಕ್ರಿಯಿಸುವಂತೆ ಚುನಾವಣಾ ಆಯೋಗ ಶರ್ಮಾ ಅವರಿಗೆ ಸೂಚಿಸಿದೆ. ಎನ್‌ಐಎಯನ್ನು ದುರ್ಬಳಕೆ ಮಾಡಿಕೊಂಡು ಮೊಹಿಲಾರಿ ಅವರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಶರ್ಮಾ ಅವರು ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು. ಅಸ್ಸಾಂನಲ್ಲಿ ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) ಕಾಂಗ್ರೆಸ್‌ನ ಮಿತ್ರ ಪಕ್ಷ.
ಅಸ್ಸಾಂನಲ್ಲಿ ವಿಧಾನಸಭೆ ಚುನಾವಣೆ ಮೂರು ಹಂತಗಳಲ್ಲಿ ನಡೆಯುತ್ತಿದೆ. ಮೊದಲ ಹಂತದ ಮತದಾನ ಮಾರ್ಚ್ 27 ಹಾಗೂ ಎರಡನೇ ಹಂತದ ಮತದಾನ ಗುರುವಾರ ನಡೆದಿದೆ. ಕೊನೆಯ ಹಂತದ ಮತದಾನ ಎಪ್ರಿಲ್ 6ರಂದು ನಡೆಯಲಿದೆ. ಮೇಲ್ನೋಟಕ್ಕೆ ಶರ್ಮಾ ಅವರು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿರುವುದು ಕಂಡು ಬಂದಿದೆ ಎಂದು ಆಯೋಗ ನೋಟಿಸಿನಲ್ಲಿ ಹೇಳಿದೆ.