ಕೊರೋನ ಹೆಚ್ಚಳ ಹಿನ್ನೆಲೆ: ಬೆಂಗಳೂರಿನಲ್ಲಿ 6ರಿಂದ 9ನೆ ತರಗತಿ ಸ್ಥಗಿತಗೊಳಿಸಿ ಸರಕಾರ ಆದೇಶ

ಬೆಂಗಳೂರು, ಎ.1: ಬೆಂಗಳೂರು ನಗರದಲ್ಲಿ ಕೊರೋನ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಆದೇಶ ನೀಡುವವರೆಗೆ 6ರಿಂದ 9ನೆ ತರಗತಿಗಳನ್ನು ಭೌತಿಕವಾಗಿ ಸ್ಥಗಿತಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
10ನೆ ತರಗತಿಗಳು ಎಂದಿನಂತೆ ಮುಂದುವರಿಯಲಿವೆ. ಆದರೆ, ವಿದ್ಯಾರ್ಥಿಗಳು ಶಾಲೆಗೆ ಬರುವುದು ಕಡ್ಡಾಯವಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ. ರಾಜ್ಯದ ಉಳಿದೆಡೆ ಸದ್ಯ ಈಗ ಜಾರಿಯಲ್ಲಿರುವ ವ್ಯವಸ್ಥೆಯೇ ಮುಂದುವರೆಯಲಿದೆ. ಈ ನೂತನ ಆದೇಶ ಸದ್ಯ ಕೇವಲ ಬೆಂಗಳೂರು ನಗರ ವ್ಯಾಪ್ತಿಗೆ ಮಾತ್ರ ಒಳಪಡಲಿದೆ ಎಂದು ಹೇಳಿದರು.
ಶಾಲೆಗಳಲ್ಲಿ ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿಯ ಕುರಿತು ಸಿಎಂ ಅವರೊಂದಿಗೆ ಚರ್ಚಿಸಲಾಗಿದ್ದು, ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಬೆಂಗಳೂರಿನಲ್ಲಿ ಫೆ.22ರಿಂದ ಶಾಲೆಗಳನ್ನು ಪ್ರಾರಂಭ ಮಾಡಲಾಗಿತ್ತು. 8ನೆ ತರಗತಿಗೆ ಭೌತಿಕ, 6 ಮತ್ತು 7ನೆ ತರಗತಿಗೆ ವಿದ್ಯಾಗಮ ತರಗತಿಗಳು ನಡೆಯುತ್ತಿದ್ದವು. ಬೆಂಗಳೂರಿನಲ್ಲಿ ಕೊರೋನ ಸೋಂಕು ಹೆಚ್ಚಳದಿಂದಾಗಿ 6ರಿಂದ 9ನೆ ತರಗತಿಗಳನ್ನು ಸಂಪೂರ್ಣ ಸ್ಥಗಿತಗೊಳಿಸುವುದಾಗಿ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ. ಕಡ್ಡಾಯ ಶಿಕ್ಷಣ ಕಾಯ್ದೆ ಅವಕಾಶಗಳಡಿಯಲ್ಲಿ ಶಾಲೆಗಳು ನಡೆಸಬೇಕಾದ ಮೌಲ್ಯಾಂಕನ ಪರೀಕ್ಷೆಗಳ ಕುರಿತು ಮುಂದಿನ ದಿನಗಳಲ್ಲಿ ಅಗತ್ಯ ನಿರ್ದೇಶನಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಬೆಂಗಳೂರು ನಗರದಲ್ಲಿ 90ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೊರೋನ ಸೋಂಕು ತಗುಲಿದ್ದು, ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಿಂದಾಗಿ ಕೆಲವು ಶಾಲೆಗಳನ್ನು ಬಂದ್ ಮಾಡಲಾಗಿದೆ. ಬೆಂಗಳೂರಿನಲ್ಲಿ 10ಕ್ಕೂ ಅಧಿಕ ಬಿಬಿಎಂಪಿ ಶಾಲೆಗಳು ತಾತ್ಕಾಲಿಕವಾಗಿ ಬಂದ್ ಆಗಿವೆ. ಒಬ್ಬ ವಿದ್ಯಾರ್ಥಿಯಿಂದ ಹಲವರಿಗೆ ಸೋಂಕು ಹಬ್ಬುತ್ತಿದೆ. ಸೋಂಕು ಪತ್ತೆಯಾದ ಶಾಲೆಗಳನ್ನ ಬಿಬಿಎಂಪಿ ತಾತ್ಕಾಲಿಕವಾಗಿ ಬಂದ್ ಮಾಡಲಾಗುತ್ತಿದೆ. ಇನ್ನೂ ಭಾಗಶಃ ಮಕ್ಕಳ ಕೊರೋನ ರಿಪೋರ್ಟ್ ಬಾರದ ಕಾರಣ ಪೋಷಕರಲ್ಲಿ ಆತಂಕ ಮನೆಮಾಡಿದೆ. ಟೆಸ್ಟ್ ಮಾಡಿಸಿ ಸಾಕಷ್ಟು ದಿನಗಳು ಕಳೆದರು ಟೆಸ್ಟ್ ರಿಪೋರ್ಟ್ ಬಂದಿಲ್ಲದೇ ಇರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ.







