110 ಮಿಲಿಯನ್ ಗ್ರಾಹಕರ ಮಾಹಿತಿ ಸೋರಿಕೆ ಆರೋಪ: ತನಿಖೆಗೆ ಆರ್‌ಬಿಐ ಸೂಚನೆ

ಹೊಸದಿಲ್ಲಿ, ಎ.1: 110 ಮಿಲಿಯನ್ ಬಳಕೆದಾರರ ಖಾಸಗಿ ಮಾಹಿತಿ ಸೋರಿಕೆಯಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಡಿಜಿಟಲ್ ಪಾವತಿ ಸಂಸ್ಥೆ ಮೊಬಿಕ್ವಿಕ್‌ಗೆ ಆದೇಶಿಸಿರುವ ಆರ್‌ಬಿಐ, ಲೋಪ ಕಂಡುಬಂದಲ್ಲಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದೆ.
ಸಿಖೊಯಿಯ ಕ್ಯಾಪಿಟಲ್ ಮತ್ತು ಭಾರತದ ಬಜಾಜ್ ಫೈನಾನ್ಸ್‌ನ ಸಹಯೋಗದಲ್ಲಿ ಅಸ್ತಿತ್ವಕ್ಕೆ ಬಂದಿರುವ ಮೊಬಿಕ್ವಿಕ್‌ನಲ್ಲಿ ಬಳಕೆದಾರರ ಮಾಹಿತಿ ಸೋರಿಕೆಯಾಗಿರುವ ಬಗ್ಗೆ ಹಲವು ಬಳಕೆದಾರರು ಹಾಗೂ ಡಿಜಿಟಲ್ ಹಕ್ಕುಗಳ ಕಾರ್ಯಕರ್ತರು ಟೀಕಿಸಿದ್ದರು. ಆದರೆ ಸಂಸ್ಥೆ ಈ ಆರೋಪವನ್ನು ನಿರಾಕರಿಸಿತ್ತು. ಅಲ್ಲದೆ, ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿರುವ ಲೋಪವನ್ನು ಮೊದಲು ಪತ್ತೆಹಚ್ಚಿದ ಭದ್ರತಾ ಸಂಶೋಧಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಮೊಬಿಕ್ವಿಕ್ ಎಚ್ಚರಿಕೆ ನೀಡಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಲೂ ಅವಕಾಶವಿದೆ. ಮೊಬಿಕ್ವಿಕ್ ನೀಡಿರುವ ಉತ್ತರ ಅತೃಪ್ತಿಕರ ಎಂದಿರುವ ಆರ್‌ಬಿಐ, ತಕ್ಷಣ ಆರೋಪದ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ತಮ್ಮ ಕ್ರೆಡಿಟ್ ಕಾರ್ಡ್ ವಿವರಗಳು ಆನ್‌ಲೈನ್ ಡಾಟಾಕೇಂದ್ರದಲ್ಲಿ ಇರುವುದನ್ನು ಗಮನಿಸಿದ್ದು ಈ ಡಾಟಾಕೇಂದ್ರವು ಮೊಬಿಕ್ವಿಕ್‌ಗೆ ಸಂಬಂಧಿಸಿದ್ದಾಗಿದೆ ಎಂದು ಹಲವು ಗ್ರಾಹಕರು ದೂರಿದ್ದರು.