ಜಲಶಕ್ತಿ ಅಭಿಯಾನದಡಿ ಮಳೆ ನೀರು ಸಂರಕ್ಷಣೆಗೆ ಸಿದ್ಧತೆ ನಡೆಸಲು ದ.ಕ. ಜಿಪಂ ಸಿಇಒ ಸೂಚನೆ
ಮಂಗಳೂರು,ಎ.1: ಜಲಶಕ್ತಿ ಅಭಿಯಾನದಡಿ ಮುಂದಿನ 100 ದಿನಗಳಲ್ಲಿ ಪ್ರತೀ ಗ್ರಾಮದಲ್ಲಿ ಮಳೆ ನೀರು ಸಂರಕ್ಷಣೆ ಮಾಡಲು ಸಿದ್ಧತೆ ನಡೆಸಬೇಕು ದ.ಕ.ಜಿಪಂ ಸಿಇಒ ಡಾ.ಕುಮಾರ್ ಹೇಳಿದರು. ದ.ಕ.ಜಿಪಂನ ನೇತ್ರಾವತಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಗ್ರ ಕೆರೆಗಳ ಅಭಿವೃದ್ಧಿಯಡಿ ಯಾವೆಲ್ಲ ಕೆರೆಗಳನ್ನು ದುರಸ್ಥಿಗೊಳಿಸಬೇಕು ಮತ್ತು ಹೂಳೆತ್ತಬೇಕು ಎಂಬುದನ್ನು ಸಮೀಕ್ಷೆ ಮಾಡಬೇಕು. ಪ್ರತಿಯೊಂದು ಗ್ರಾಪಂನಲ್ಲಿ ಕನಿಷ್ಠ 1 ಅಥವಾ 2 ಹೊಸ ಕೆರೆಯ ನಿರ್ಮಾಣ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡುವುದರ ಜೊತೆಗೆ ಜಲಮೂಲಗಳಿಗೆ ಸಂಬಂಧಿಸಿದ ಅತಿಕ್ರಮಣವನ್ನು ತೆರವುಗೊಳಿಸಿ ಪುನಶ್ಚೇತನಗೊಳಿಸಬೇಕು ಎಂದರು.
ಗ್ರಾಪಂ ವ್ಯಾಪ್ತಿಯ ಮನೆಗಳಿಗೆ ಬಚ್ಚಲುಗುಂಡಿಗಳ ನಿರ್ಮಾಣ ಕಾಮಗಾರಿ ಮಾಡಬೇಕಾಗಿದೆ. ಈವರೆಗೆ ಬಚ್ಚಲು ಗುಂಡಿ ನಿರ್ಮಾಣ ಆಗದಿರುವ ಮನೆಗಳನ್ನು ಸಮೀಕ್ಷೆ ಮಾಡಿ ಜಲಶಕ್ತಿ ಅಭಿಯಾನದಲ್ಲಿ ಹಾಗೂ ನರೇಗಾ ಯೋಜನೆಯಡಿಯಲ್ಲಿ ಕೈಗೊಳ್ಳಬೇಕು ಎಂದು ಕುಮಾರ್ ಹೇಳಿದರು.
ಗ್ರಾಮೀಣ ಭಾಗದ ವಸತಿ ನಿಲಯಗಳು, ಶಾಲೆಗಳು, ಅಂಗನವಾಡಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತಿತರ ಸರಕಾರಿ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಘಟಕವನ್ನು ಗ್ರಾಪಂ ಮೂಲಕ ನಿರ್ಮಾಣ ಮಾಡಬೇಕು ಎಂದರು.
ಅರಣ್ಯೀಕರಣ ಯೋಜನೆಯಡಿ ರಸ್ತೆಗಳ ಬದಿಗಳಲ್ಲಿ ಗಿಡ ಮರಗಳನ್ನು ನೆಡಬೇಕು, ಕೆರೆ ಬದಿ, ಶಾಲೆ, ಅಂಗನವಾಡಿ, ವಸತಿ ನಿಲಯ, ರೈತರ ಜಮೀನು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಸರಕಾರಿ ಸಂಸ್ಥೆಯ ಕಟ್ಟಡದ ಆವರಣದಲ್ಲಿ ಕೈತೋಟಗಳನ್ನು ನಿರ್ಮಾಣ ಮಾಡಬೇಕು ಎಂದು ಕುಮಾರ್ ಸೂಚಿಸಿದರು.
ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಕೆ. ಆನಂದ್ ಕುಮಾರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.







