ಕರ್ನಾಟಕ-ಕೇರಳ ರಾಜ್ಯಗಳ ನಡುವಿನ ಗಡಿ ಪ್ರವೇಶದಲ್ಲಿ ನಿರ್ಬಂಧವಿಲ್ಲ: ಹೈಕೋರ್ಟ್ ಗೆ ಸರಕಾರದ ಭರವಸೆ

ಬೆಂಗಳೂರು, ಎ.1: ಕರ್ನಾಟಕ-ಕೇರಳ ರಾಜ್ಯಗಳ ನಡುವಿನ ಗಡಿಗಳಲ್ಲಿ ಪ್ರಯಾಣಿಕರ ಸಂಚಾರಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ರಾಜ್ಯ ಸರಕಾರ ಭರವಸೆ ನೀಡಿರುವುದನ್ನು ದಾಖಲಿಸಿಕೊಂಡ ಹೈಕೋರ್ಟ್ ಅರ್ಜಿಯನ್ನು ಇತ್ಯರ್ಥಪಡಿಸಿತು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೇರಳ ಗಡಿ ನಿರ್ಬಂಧಿಸಿದ್ದ ಕ್ರಮ ಪ್ರಶ್ನಿಸಿ ಕಾಸರಗೋಡಿನ ವಕೀಲ ಬಿ. ಸುಬ್ಬಯ್ಯ ರೈ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ನ್ಯಾಯಪೀಠ, ಅರ್ಜಿಯನ್ನು ಇತ್ಯರ್ಥಪಡಿಸಿ ಆದೇಶ ಹೊರಡಿಸಿತು.
ಕೊರೋನ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ 2021ರ ಫೆ.18ರಂದು ಕರ್ನಾಟಕ-ಕೇರಳ ರಾಜ್ಯಗಳ ನಡುವಿನ ಪ್ರವೇಶವನ್ನು ನಿರ್ಬಂಧಿಸಿ ಆದೇಶ ಹೊರಡಿಸಿದ್ದರು. ಕೊರೋನ ಹೆಚ್ಚಳ ಆಗುತ್ತಿರುವ ಸಂಬಂಧ 2021ರ ಮಾ.15ರಂದು ಸ್ಥಳೀಯ ಆಡಳಿತ ಸಂಸ್ಥೆಗಳ ಮೂಲಕ ಸಂಚಾರ ನಿರ್ಬಂಧಿಸಲು ಆದೇಶ ಹೊರಡಿಸಿದ್ದರು. ಆದರೆ, ಸರಕಾರಿ ಪರ ವಕೀಲರು, ಕರ್ನಾಟಕ-ಕೇರಳ ರಾಜ್ಯಗಳ ನಡುವಿನ ಗಡಿಗಳಲ್ಲಿ ಪ್ರಯಾಣಿಕರ ಸಂಚಾರಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಪೀಠಕ್ಕೆ ತಿಳಿಸಿದ್ದರು.
ಈ ಹೇಳಿಕೆಯನ್ನು ಮಾನ್ಯ ಮಾಡಿದ್ದ ನ್ಯಾಯಪೀಠವು 2021ರ ಜ.27ರಿಂದ ಜಾರಿಯಲ್ಲಿರುವ ಹೊಸ ನಿಯಮಾವಳಿ ಪ್ರಕಾರ ರಾಜ್ಯಗಳ ಗಡಿ ಪ್ರವೇಶಗಳನ್ನು ಮುಚ್ಚುವಂತಿಲ್ಲ. ಗಡಿಗಳಲ್ಲಿ ಸಂಚಾರಕ್ಕೆ ನಿರ್ಬಂಧ ವಿಧಿಸುವುದೂ ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗುತ್ತದೆ ಎಂದು ನ್ಯಾಯಪೀಠವು ಹೇಳಿದೆ.







