ನಂದಿಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಮತಗಟ್ಟೆ ವಶ: ಟಿಎಂಸಿ ಆರೋಪ
ಹೊಸದಿಲ್ಲಿ, ಎ. 1: ನಂದಿಗ್ರಾಮ ವಿಧಾನ ಸಭಾ ಕ್ಷೇತ್ರದಲ್ಲಿ ನಡೆದ ಮತದಾನದ ಸಂದರ್ಭ ಬಿಜೆಪಿ ಮತಗಟ್ಟೆ ವಶಪಡಿಸಿಕೊಳ್ಳಲು ಪ್ರಯತ್ನಿಸಿರುವುದಾಗಿ ಆರೋಪಿಸಿ ತೃಣಮೂಲ ಕಾಂಗ್ರೆಸ್ ನಾಯಕ ಡೆರಿಕ್ ಒಬ್ರಿಯಾನ್ ಚುನಾವಣಾ ಆಯೋಗಕ್ಕೆ ಗುರುವಾರ ದೂರು ಸಲ್ಲಿಸಿದ್ದಾರೆ.
‘‘ಬಿಜೆಪಿ ಕಾರ್ಯಕರ್ತರ ಬೃಹತ್ ಗುಂಪು 6, 7, 49, 27, 162, 21, 26, 13, 262, 256, 163, ಹಾಗೂ 20ನೇ ಸಂಖ್ಯೆಯ ಮತಗಟ್ಟೆ ಪ್ರವೇಶಿಸಿತು. ಮತಗಟ್ಟೆಯಲ್ಲಿ ಇವಿಎಂ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಹಾಗೂ ಮತಗಟ್ಟೆಯಲ್ಲಿ ಅಕ್ರಮ ಎಸಗಲು ಪ್ರಯತ್ನಿಸಿತು’’ ಎಂದು ಡೆರಿಕ್ ಒಬ್ರಿಯಾನ್ ಚುನಾವಣಾ ಆಯೋಗಕ್ಕೆ ನೀಡಿದ ದೂರಿನಲ್ಲಿ ಹೇಳಿದ್ದಾರೆ.
ಪಶ್ಚಿಮಬಂಗಾಳ ವಿಧಾನ ಸಭೆ ಚುನಾವಣೆಗೆ ಗುರುವಾರ 30 ಕ್ಷೇತ್ರಗಳಲ್ಲಿ ಎರಡನೇ ಹಂತದ ಮತದಾನ ನಡೆದಿದೆ. ಇದರಲ್ಲಿ ಪ್ರತಿಷ್ಠಿತ ಕ್ಷೇತ್ರವಾಗಿರುವ ನಂದಿಗ್ರಾಮ ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ಹಾಗೂ ಅವರ ಆಶ್ರಯದಲ್ಲಿದ್ದು ಎದುರಾಳಿಯಾದ, ಬಿಜೆಪಿಯ ಅಭ್ಯರ್ಥಿಯಾಗಿರುವ ಸುವೇಂದು ಅಧಿಕಾರಿ ನಡುವಿನ ನೇರ ಸ್ಪರ್ಧೆಗೆ ಸಾಕ್ಷಿಯಾಗಿದೆ. ನಂದಿಗ್ರಾಮ ವಿಧಾನ ಸಭಾ ಕ್ಷೇತ್ರ ಅತಿ ಸೂಕ್ಷ್ಮವಾಗಿರುವುದರಿಂದ ಮುಕ್ತ ಹಾಗೂ ಪಾರದರ್ಶಕ ಚುನಾವಣೆ ನಡೆಯಲು ಶುಕ್ರವಾರದ ವರೆಗೆ ಇಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮತಗಟ್ಟೆಗಳಿಂದ ದುಷ್ಕರ್ಮಿಗಳನ್ನು ದೂರ ಇರಿಸಲು ಈ ಕ್ಷೇತ್ರಕ್ಕೆ ಕೇಂದ್ರ ಮೀಸಲು ಪಡೆಯನ್ನು ನಿಯೋಜಿಸಲಾಗಿದೆ.