ವಾಝೆ ಜತೆ ಪಂಚತಾರಾ ಹೋಟೆಲ್ನಲ್ಲಿದ್ದ ಮಹಿಳೆಯ ಬಂಧನ

ಸಚಿನ್ ವಾಝೆ (File photo: PTI)
ಮುಂಬೈ, ಎ.2: ಮುಖೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ತುಂಬಿದ್ದ ವಾಹನ ಪತ್ತೆಯಾಗುವ ಕೆಲ ದಿನಗಳ ಮುನ್ನ ದಕ್ಷಿಣ ಮುಂಬೈ ಪಂಚತಾರಾ ಹೋಟೆಲ್ನಿಂದ ಎಪಿಐ ಸಚಿನ್ ವಾಝೆ ಜತೆ ಹೊರಬಂದ ಮಹಿಳೆಯನ್ನು ರಾಷ್ಟ್ರೀಯ ತನಿಖಾ ತಂಡ ಬಂಧಿಸಿದೆ.
ಈ ಮಹಿಳೆ ವಾಝೆ ಜತೆ ಹೋಟೆಲ್ನಿಂದ ಹೊರಬರುತ್ತಿರುವುದು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಸ್ಫೋಟಕ ಪ್ರಕರಣದ ಸಂಬಂಧ ಈಗಾಗಲೇ ವಾಝೆ ಅವರನ್ನು ಎನ್ಐಎ ತಂಡ ಬಂಧಿಸಿದೆ. ಮಹಿಳೆಯನ್ನೂ ಬಂಧಿಸಿದ ಎನ್ಐಎ ತಂಡ ಆಕೆಯ ಫ್ಲ್ಯಾಟ್ನಲ್ಲಿ ಶೋಧ ಕಾರ್ಯಾಚರಣೆ ನಡೆಸಿತು. ಮಹಿಳೆಯನ್ನು ವಿಚಾರಣೆಗೆ ಗುರಿಪಡಿಸಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.
"ಈ ಮಹಿಳೆ ವಾಝೆಯ ಕಪ್ಪುಹಣವನ್ನು 'ಬಿಳಿ' ಮಾಡಲು ಸಹಕರಿಸಿದ್ದಳು ಎನ್ನುವುದು ವಿಚಾರಣೆಯಿಂದ ತಿಳಿದುಬಂದಿದೆ. ಎರಡು ಐಡಿಗಳನ್ನು ಬಳಸಿ ಈ ದಂಧೆ ನಡೆಸುತ್ತಿದ್ದಳು. ವಾಝೆಯ ಮರ್ಸಿಡಿಸ್ ಕಾರಿನಲ್ಲಿ ಪತ್ತೆಯಾದ ನೋಟು ಎಣಿಕೆ ಯಂತ್ರ ಕೂಡಾ ಈಕೆಗೆ ಸೇರಿದ್ದು" ಎಂದು ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.
ಎನ್ಐಎ ತಂಡ ಗುರುವಾರ ಬಬೂನ್ನಾಥ್ನಲ್ಲಿರುವ ಹೋಟೆಲ್ & ಕ್ಲಬ್ ಮೇಲೂ ದಾಳಿ ನಡೆಸಿದ್ದು, ಉದ್ಯಮಿ ಮನ್ಸುಖ್ ಹಿರಾನ್ ಹತ್ಯೆ ಪ್ರಕರಣಕ್ಕೆ ವಾಝೆ ಬಳಸಿದ್ದರು ಎನ್ನಲಾದ ಎಂಟು ಸಿಮ್ಕಾರ್ಡ್ಗಳನ್ನು ವಶಪಡಿಸಿಕೊಂಡಿದೆ. ಹಿರಾನ್ ಅವರಿಗೆ ಸೇರಿದ್ದ ಸ್ಕಾರ್ಪಿಯೊದಲ್ಲಿ ಸ್ಫೋಟಕ ಇರಿಸಿ ಫೆಬ್ರವರಿ 25ರಂದು ಅಂಬಾನಿ ನಿವಾಸದ ಮುಂದೆ ನಿಲ್ಲಿಸಲಾಗಿತ್ತು.
ವಾಝೆ ಸೂಚನೆ ಮೇರೆಗೆ ಈ ಕ್ಲಬ್ಗೆ ಆರೋಪಿ ನರೇಶ್ ಗೋರ್ ಎಂಬಾತನನ್ನು ನೇಮಕ ಮಾಡಿಕೊಳ್ಳಲಾಗಿತ್ತು. ತಮ್ಮ ಸ್ವಂತ ಬಳಕೆಗೆ ಈ ಸಿಮ್ಗಳನ್ನು ತಂದುಕೊಡುವಂತೆ ವಾಝೆ ಸೂಚನೆ ನೀಡಿದ್ದರು ಎನ್ನಲಾಗಿದೆ.







