ಕೊರೋನ ಪರೀಕ್ಷಾ ವರದಿ ಇಲ್ಲದೇ ಕುಂಭಮೇಳಕ್ಕೆ ಆಗಮಿಸಿದ ಸಾವಿರಾರು ಜನರು

ಕುಂಭಮೇಳ (Photo credit PTI)
ಹರಿದ್ವಾರ, ಎ.2: ಕೊರೋನ ವೈರಸ್ ಸೋಂಕು ಪರೀಕ್ಷೆಯ ವರದಿ ಇಲ್ಲದೇ ಸಾವಿರಾರು ಮಂದಿ ಕುಂಭಮೇಳದಲ್ಲಿ ಭಾಗವಹಿಸುವ ಸಲುವಾಗಿ ಗುರುವಾರ ಇಲ್ಲಿ ಬಂದಿಳಿದಿದ್ದಾರೆ. ಗರ್ವಾಲ್ ಆಯುಕ್ತ ರವಿನಾಥ್ ರಮಣ್ ಸ್ಥಳೀಯ ರೈಲು ನಿಲ್ದಾಣದಲ್ಲಿ ತಪಾಸಣೆ ಕೈಗೊಂಡ ವೇಳೆ ಈ ಅಂಶ ಬೆಳಕಿಗೆ ಬಂದಿದೆ ಎಂದು The New Indian Express ವರದಿ ಮಾಡಿದೆ.
ಗುರುವಾರ ಆರಂಭವಾಗಿರುವ ಕುಂಭಮೇಳಕ್ಕೆ ಪ್ರತಿದಿನ 10 ಸಾವಿರಕ್ಕೂ ಹೆಚ್ಚು ಯಾತ್ರಾರ್ಥಿಗಳು ರೈಲಿನಲ್ಲಿ ಆಗಮಿಸುತ್ತಿದ್ದಾರೆ ಎಂದು ನಿಲ್ದಾಣದ ಅಧೀಕ್ಷಕ ಎಂ.ಕೆ.ಸಿಂಗ್ ಹೇಳಿದ್ದಾರೆ.
ರೈಲಿನಲ್ಲಿ ಆಗಮಿಸುವ ಯಾತ್ರಾರ್ಥಿಗಳು ತಮ್ಮ ಆರ್ಟಿ-ಪಿಸಿಆರ್ ನೆಗೆಟಿವ್ ವರದಿಯನ್ನು ಹಾಜರುಪಡಿಸಿದ ಬಳಿಕವಷ್ಟೇ ಮುಂದಕ್ಕೆ ಹೋಗಲು ರೈಲ್ವೆ ಅಧಿಕಾರಿಗಳು ಅವಕಾಶ ನೀಡಬೇಕು ಎಂದು ಗರ್ವಾಲ್ ಆಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ನೆಗೆಟಿವ್ ವರದಿ ಹೊಂದಿಲ್ಲದ ಪ್ರಯಾಣಿಕರನ್ನು ಸ್ಥಳದಲ್ಲೇ ಪರೀಕ್ಷೆಗೆ ಒಳಪಡಿಸಿ, ಪರೀಕ್ಷೆಯಲ್ಲಿ ನೆಗೆಟಿವ್ ಬಂದಲ್ಲಿ ಮಾತ್ರ ಅವರನ್ನು ಮುಂದಕ್ಕೆ ಹೋಗಲು ಅವಕಾಶ ನೀಡಬೇಕು ಎಂದು ಸೂಚಿಸಿದ್ದಾರೆ.
ತಕ್ಷಣದಿಂದಲೇ ನಿರೀಕ್ಷಣಾ ಸ್ಥಳವನ್ನು ವಿಸ್ತರಿಸುವಂತೆ ಆಯಕ್ತರು ಆದೇಶಿಸಿದ್ದು, ವರದಿಗಾಗಿ ಕಾಯುವ ಪ್ರಯಾಣಿಕರಿಗೆ ಸೂಕ್ತ ಕುಡಿಯುವ ನೀರು, ಶೌಚಾಲಯ ಮತ್ತಿತರ ವ್ಯವಸ್ಥೆಯನ್ನು ಕಲ್ಪಿಸುವಂತೆ ಸಲಹೆ ಮಾಡಿದ್ದಾರೆ. ರೈಲ್ವೆ ಅಧಿಕಾರಿಗಳು, ಯಾತ್ರಾರ್ಥಿಗಳು ಹೊರಡುವ ರೈಲು ನಿಲ್ದಾಣದ ಅಧಿಕಾರಿಗಳ ಜತೆ ಸಂಪರ್ಕಿಸಿ, ಕೋವಿಡ್-19 ನೆಗೆಟಿವ್ ವರದಿ ಇದ್ದ ಪ್ರಯಾಣಿಕರು ಮಾತ್ರ ಹರಿದ್ವಾರಕ್ಕೆ ತೆರಳುವ ರೈಲು ಏರಲು ಅವಕಾಶ ಕಲ್ಪಿಸುವಂತೆ ಕಡ್ಡಾಯಪಡಿಸಬೇಕು ಎಂದು ಸೂಚಿಸಿದ್ದಾರೆ.
ಕುಂಭಮೇಳದಲ್ಲಿ ಭಾಗವಹಿಸುವ ಭಕ್ತರು, ಆಗಮಿಸುವ 72 ಗಂಟೆಗಳ ಮುನ್ನ ಪರೀಕ್ಷೆ ಮಾಡಿಸಿ ನೆಗೆಟಿವ್ ಆರ್ಟಿ-ಪಿಸಿಆರ್ ವರದಿ ತರುವುದು ಕಡ್ಡಾಯ ಎಂದು ಉತ್ತರಾಖಂಡ ಹೈಕೋರ್ಟ್ ಆದೇಶಿತ್ತು.