ಬೆದರಿಕೆ ತಂತ್ರಗಳಿಗೆ ಜಗ್ಗುವ ಬಗ್ಗುವ ಮಗ ನಾನಲ್ಲ: ಸಚಿವ ಕೆ.ಎಸ್.ಈಶ್ವರಪ್ಪ
“ಪಕ್ಷ ಉಳಿಸುವ ಕೆಲಸ ಮಾಡಿದ್ದೇನೆ. ನನ್ನ ಮೇಲೆ ಯಾರೂ ಕ್ರಮ ಜರುಗಿಸಲು ಸಾಧ್ಯವಿಲ್ಲ”

ಮೈಸೂರು, ಎ.2: “ನನ್ನ ವಿರುದ್ಧ ಕೆಲವು ಶಾಸಕರು, ಮಂತ್ರಿಗಳು ಸಹಿ ಸಂಗ್ರಹ ಮಾಡಿ ಕ್ರಮ ಜರುಗಿಸುವಂತೆ ಒತ್ತಾಯ ಮಾಡಿದ್ದಾರೆ. ಇದಕ್ಕೆಲ್ಲ ಜಗ್ಗುವ, ಬಗ್ಗುವವನು ನಾನಲ್ಲ” ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಮೈಸೂರು ಜಿ.ಪಂ.ಸಭಾಂಗಣದಲ್ಲಿಂದು ಕೆಡಿಪಿ ಸಭೆ ನಡೆಸಿ ಬಳಿಕ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಕೆಲವು ಶಾಸಕರು, ಮಂತ್ರಿಗಳು ನನ್ನ ವಿರುದ್ಧ ಸಹಿ ಸಂಗ್ರ ಮಾಡಿ ಸುದ್ದಿಗೋಷ್ಠಿಯನ್ನು ನಡೆಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ನಾನು ಸಂಘಟನೆಯಿಂದ ಬಂದವನು, ಇಂತಹ ಬೆದರಿಕೆ ತಂತ್ರಗಳಿಗೆ ಜಗ್ಗುವ ಬಗ್ಗುವ ಮಗ ನಾನಲ್ಲ. ಈ ಸುದ್ದಿಗೋಷ್ಠಿ ನಡೆಸಿದ ಕೆಲವು ಶಾಸಕರುಗಳು ಮತ್ತು ಮಂತ್ರಿಗಳು ನನಗೆ ದೂರವಾಣಿ ಕರೆ ಮಾಡಿ, ಸರ್ ನೀವು ಮಾಡಿರುವ ಕ್ರಮ ಸರಿಯಾಗಿದೆ. ಕೆಲವು ಒತ್ತಡಗಳಿಂದ ನಾವು ಸುದ್ದಿಗೋಷ್ಠಿ ಮಾಡಿರುವುದಾಗಿ ಹೇಳಿದ್ದಾರೆ ಎಂದರು.
ನಾನು ಯಾರಿಗೂ ದೂರನ್ನು ನೀಡಿಲ್ಲ, ಮುಖ್ಯಮಂತ್ರಿ ಕೆಲವು ಇಲಾಖಾ ರೂಲ್ಸ್ ಮತ್ತು ಪ್ರೊಸಿಜರ್ ಅನ್ನು ಉಲ್ಲಂಘನೆ ಮಾಡಿ 1,299 ಕೋಟಿ ರೂ.ಗಳನ್ನು ರಾಜ್ಯದ ಕೆಲವು ಶಾಸಕರುಗಳಿಗೆ ನೀಡಿದ್ದರು, ಜೊತೆಗೆ ಬೆಂಗಳೂರು ನಗರ ಜಿ.ಪಂ. ಅಧ್ಯಕ್ಷ ಮರಿಸ್ವಾಮಿ ಅವರಿಗೆ 65 ಕೋಟಿ ರೂ. ನೀಡಿದ್ದರು. ಇದು ಸರಿಯಲ್ಲ ಎಂದು ಹೇಳಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೆ. ಆದರೆ ಅವರು ಯಾವುದಕ್ಕೂ ಪ್ರತಿಕ್ರಿಯಿಸಲಿಲ್ಲ ಎಂದು ಹೇಳಿದರು.
ನಂತರ ನಾನು ನಮ್ಮ ಪಕ್ಷದ ನಾಯಕರುಗಳಾದ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮತ್ತು ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಅವರ ಗಮನಕ್ಕೆ ತಂದೆ. ಅವರು ತಕ್ಷಣ ಇದನ್ನು ತಡೆ ಹಿಡಿಯುವಂತೆ ಹೇಳಿದರು. ಹಾಗಾಗಿ ನಾನು ರಾಜ್ಯಪಾಲರನ್ನು ಭೇಟಿ ಮಾಡಿ ಅವರ ಗಮನಕ್ಕೆ ತಂದು ತಡೆಹಿಡಿಸಿದೆ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.
ನಾನು ಸಂಘಟನೆಯಿಂದ ಬಂದವನು, ನನಗೆ ಪಕ್ಷ ಮುಖ್ಯ, ಪಕ್ಷ ನನ್ನ ತಾಯಿ ಇದ್ದ ಹಾಗೆ, ಪಕ್ಷ ಸರಿದಾರಿ ಬಿಟ್ಟು ಹೋಗುತ್ತಿದೆ ಎಂದಾಗ ಅದನ್ನು ಸರಿಪಡಿಸುವುದು ನಮ್ಮ ಕರ್ತವ್ಯ ಹಾಗಾಗಿ ನಾನು ಪಕ್ಷ ಉಳಿಸುವ ಕೆಲಸವನ್ನು ಮಾಡಿದ್ದೇನೆ. ನನ್ನ ಮೇಲೆ ಯಾರೂ ಕ್ರಮ ಜರುಗಿಸಲು ಸಾಧ್ಯವಿಲ್ಲ, ಪಕ್ಷ ಏನು ತೀರ್ಮಾನ ಮಾಡುತ್ತದೊ ಅದಕ್ಕೆ ನಾನು ಬದ್ಧ ಎಂದು ಹೇಳಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೂ ಹೇಳಿಕೆ ಮಾತುಗಳನ್ನು ಕೇಳುವುದು ಹೆಚ್ಚು, ಹಾಗಾಗೆ ಅವರು ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದರು. ಅಲ್ಲಿ ಯಶಸ್ಸು ಕಾಣದೆ ಬಿಜೆಪಿಗೂ ತೊಂದರೆ ಮಾಡಿದರು. ನಂತರ ಅವರ ಮಗ ರಾಘವೇಂದ್ರನ ಮೂಲಕ ಬಿಜೆಪಿಗೆ ಬರುವಂತೆ ಪ್ರಯತ್ನ ಮಾಡಿದರು. ಆಗ ನಾನು, ಡಿ.ಎಚ್.ಶಂಕರಮೂರ್ತಿ ಹೈಕಮಾಂಡ್ ಜೊತೆ ಮಾತನಾಡಿ ಅವರನ್ನು ಪಕ್ಷಕ್ಕೆ ಕರೆತಂದೆವು, ಲೆಹರ್ ಸಿಂಗ್ ಮನೆಯಲ್ಲಿ ಇದೇ ಯಡಿಯೂರಪ್ಪ ನಾನು ತಪ್ಪು ಮಾಡಿ ಬಿಟ್ಟೆ, ನನ್ನ ಜೊತೆಯಲ್ಲಿದ್ದ ಕೆಲವರು ಕೆಜೆಪಿ ಕಟ್ಟಿ ನಾವುಗಳು ಬರುತ್ತೇವೆ ಎಂದರು. ಆದರೆ ಅವರ್ಯಾರು ಬರಲಿಲ್ಲ ಎಂದು ಅಳಲು ತೋಡಿಕೊಂಡರು. ಈಗಲೂ ಅವರು ಹೇಳಿಕೆ ಮಾತುಗಳನ್ನು ಕೇಳಿ ಈಗ ಮತ್ತೊಂದು ತಪ್ಪು ಮಾಡಿರಬಹುದು ಎಂದರು.
ಈಗಾಗಲೇ ನಾನು ಹೈಕಮಾಂಡ್ ಗಮನಕ್ಕೆ ತಂದಿದ್ದೇನೆ, ಈ ಸಂಬಂಧ ಪ್ರಧಾನ ಮಂತ್ರಿ ಮತ್ತು ಗೃಹ ಸಚಿವರ ಗಮನಕ್ಕೂ ತಂದಿದ್ದೇನೆ, ಇಂದು ನಾನು ಶ್ರೀಚಾಮುಂಡೇಶ್ವರಿ ತಾಯಿ ದರ್ಶನ ಮಾಡಿಕೊಂಡು ಬರುತ್ತಿರಬೇಕಾದರೆ ಸ್ವತಃ ನಳೀನ್ ಕುಮಾರ್ ಕಟೀಲು ದೂರವಾಣಿ ಮಾಡಿ, ಚುನಾವಣೆ ಮುಗಿಯಲಿ ಸಮಸ್ಯೆ ಬಗೆಹರಿಸೋಣ ಎಂದು ಹೇಳಿದ್ದಾರೆ ಎಂದರು.
ನನಗೆ ಮುಖ್ಯಮಂತ್ರಿ ಮೇಲೆ ವೈಯಕ್ತಿಕ ದ್ವೇಷ ಇಲ್ಲ, ಹಾಗಂತ ಎಲ್ಲದರಲ್ಲೂ ಸರಿಯಾಗಿದ್ದೇವೆ ಅಂತಾನೂ ಇಲ್ಲ, ಆದರೆ ಮುಖ್ಯಮಂತ್ರಿ ರೂಲ್ಸ್ ಅನ್ನು ಉಲ್ಲಂಘಿಸಿರುವುದು ನಿಜ, ಮುಂದೆ ಇಂತಹ ತಪ್ಪುಗಳು ಆಗಬಾರದು ಎಂದು ನಾನು ರಾಜ್ಯಪಾಲರ ಗಮನಕ್ಕೆ ತಂದು ಸರಿಪಡಿಸುವ ಕೆಲಸ ಮಾಡಿದ್ದೇನೆ ಎಂದು ಈಶ್ವರಪ್ಪ ಹೇಳಿದರು.
ಯಾರು ಪಕ್ಷಕ್ಕೆ ದ್ರೋಹ ಮಾಡುತ್ತಿದ್ದಾರೊ ಅಂತವರ ಮೇಲೆ ಪಕ್ಷ ಕ್ರಮ ಜರುಗಿಸಲಿದೆ...
"ನಾನು ರಾಜ್ಯಪಾಲರನ್ನು ಭೇಟಿ ಮಾಡಿ ನನ್ನ ಇಲಾಖಾ ವಿಚಾರದಲ್ಲಿ ಕಾನೂನು ಉಲ್ಲಂಘನೆಯಾಗಿರುವುದನ್ನು ಗಮನಕ್ಕೆ ತಂದಿದ್ದೇನೆ. ಇದು ಸರಿಯಾಗಿದೆ ಎಂದು ನಮ್ಮ ಸಚಿವ ಸಂಪುಟ ಅನೇಕ ಸಚಿವರು, ಶಾಸಕರು, ಸಂಸದರು ಮತ್ತು ನಮ್ಮ ಪಕ್ಷದ ಅನೇಕ ಮುಖಂಡರು ದೂರವಣಿ ಕರೆ ಮಾಡಿ ಹೇಳಿದ್ದಾರೆ" ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
"ನಾನು ಮತ್ತು ಯಡಿಯೂರಪ್ಪ ಪಕ್ಷಕ್ಕಾಗಿ ದುಡಿದಿದ್ದೇವೆ. ಒಂದೇ ತಟ್ಟೆಯಲ್ಲಿ ಊಟ ಮಾಡಿದ್ದೇವೆ ಒಟ್ಟಿಗೆ ಕೆಲವೊಂದು ಬ್ಯುಸಿನೆಸ್ ಕೂಡ ಮಾಡಿದ್ದೇವೆ. ಕೆಲವೊಂದು ವಿಚಾರದಲ್ಲಿ ಸಂಘರ್ಷವೂ ಉಂಟಾಗಿದೆ. ಆದರೂ ನಮಗೆ ಪಕ್ಷ ಮುಖ್ಯ, ಪಕ್ಷವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾನು ಪ್ರಾಮಾಣಿಕ ಪ್ರಯತ್ನಪಟ್ಟಿದ್ದೇನೆ. ನನ್ನ ವಿರುದ್ಧ ಯಾರೂ ಕ್ರಮ ಜರುಗಿಸಲು ಸಾಧ್ಯವಿಲ್ಲ, ಪಕ್ಷ ಎಲ್ಲವನ್ನು ಗಮನಿಸುತ್ತಿದೆ. ಯಾರು ಪಕ್ಷಕ್ಕೆ ದ್ರೋಹ ಮಾಡುತ್ತಿದ್ದಾರೊ ಅಂತವರ ಮೇಲೆ ಕ್ರಮ ಜರುಗಿಸಲಿದ್ದಾರೆ" ಎಂದು ಹೇಳುವ ಮೂಲಕ ಮುಖ್ಯಮಂತ್ರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.
"ಮರಿಸ್ವಾಮಿ ಯಾರೆಂದು ನನಗೆ ಗೊತ್ತಿಲ್ಲ, ಇದರಲ್ಲಿ ಮುಖ್ಯಮಂತ್ರಿ ಕುಟುಂಬದವರ ಹಸ್ತಕ್ಷೇಪ ಇದೆಯಾ ಎಂಬುದೂ ನನಗೆ ಗೊತ್ತಿಲ್ಲ" ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
"ಶಾಸಕರು, ಜಿಪಂ ಸದಸ್ಯರುಗಳಿಗೆ ಹಣ ನೀಡಲೇ ಬೇಕು ಎಂದಿದ್ದರೆ ಮುಖ್ಯಮಂತ್ರಿ ನನ್ನ ಇಲಾಖೆಗೆ ಹಣ ನೀಡಿ ನಂತರ ಇಂತಹವರಿಗೆ ಹಂಚಿ ಎಂದಿದ್ದರೆ ನಾನೇ ಹಂಚುತ್ತಿದ್ದೆ. ಆದರೆ ಕಾನೂನನ್ನು ಉಲ್ಲಂಘಿಸಿ ಅವರು ನಡೆದುಕೊಂಡಿರುವ ರೀತಿ ಸರಿಯಿಲ್ಲ. ಹಾಗಾಗಿ ನಾನು ರಾಜ್ಯಪಾಲರ ಗಮನಕ್ಕೆ ತರಬೇಕಾಯಿತು" ಎಂದು ಹೇಳಿದರು.
"ನಾನು ಯಾರಿಗೂ ದೂರನ್ನು ನೀಡಿಲ್ಲ, ನಾನು ಪೋಸ್ಟ್ ಮನ್ ಅಲ್ಲ, ಪೋಸ್ಟ್ ಮನ್ ಆಗಿ ಕೆಲಸವನ್ನು ಮಾಡುವುದಿಲ್ಲ, ನನ್ನದೇನಿದ್ದರೂ ನೇರಾ ನೇರಾ, ಹಾಗಾಗಿಯೆ ನಮ್ಮ ಪಕ್ಷದ ಮುಖಂಡರ ಗಮನಕ್ಕೆ ತಂದಿದ್ದೇನೆ" ಎಂದು ಈಶ್ವರಪ್ಪ ನುಡಿದರು.
ವರಿಷ್ಠರ ಗಮನಕ್ಕೆ ತಂದೇ ರಾಜ್ಯಪಾಲರ ಭೇಟಿ
ನನ್ನ ಇಲಾಖೆಯಲ್ಲಿ ಮುಖ್ಯಮಂತ್ರಿಗಳು ಹಸ್ತಕ್ಷೇಪ ಮಾಡಿರುವ ವಿಚಾರವನ್ನು ನಮ್ಮ ಪಕ್ಷದ ವರಿಷ್ಠರ ಗಮನಕ್ಕೆ ತಂದು ಅವರ ಸೂಚನೆ ಮೇಲೆಯೇ ರಾಜ್ಯಪಾಲರನ್ನು ಭೇಟಿಯಾಗಿದ್ದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು.
ನಾನು ಮುಖ್ಯಮಂತ್ರಿಗಳ ವಿರುದ್ಧ ದೂರನ್ನು ನೀಡಿಲ್ಲ, ನನ್ನ ಗಮನಕ್ಕೆ ಬಾರದೆ ನನ್ನ ಇಲಾಖೆಯ ಅನುದಾನವನ್ನು ಹಂಚಿಕೆ ಮಾಡಿ ಕಾನೂನನ್ನು ಉಲ್ಲಂಘಿಸಲಾಗಿತ್ತು, ಆಕ್ಟ್ 1977 ರನ್ವಯ ಅವರು ನಡೆದುಕೊಂಡಿರಲಿಲ್ಲ. ಇದನ್ನು ಅರಣ್ ಸಿಂಗ್, ನಳೀನ್ ಕುಮಾರ್ ಕಟೀಲ್ ಮತ್ತು ಸಿ.ಟಿ.ರವಿ ಅವರ ಗಮಕ್ಕೆ ತರಲಾಗಿತ್ತು. ಅವರು ಅನುದಾನ ಹಂಚಿಕೆ ತಡೆಯಿಡಿಯುವಂತೆ ಸೂಚಿಸಿದರು. ಆ ನಂತರ ನಾನು ರಾಜ್ಯಪಾಲರನ್ನು ಭೇಟಿಯಾಗಿ ಅನುದಾನ ತಡೆ ಹಿಡಿಸಿದೆ ಎಂದು ಹೇಳಿದರು.







